Advertisement
ಒಂದೇ ಏಟಿಗೆ 10 ಸಿನಿಮಾಗಳು ನಿಂತು ಹೋಗಿವೆ. ನೂರಾರು ಕನಸುಗಳು ನುಚ್ಚು ನೂರಾಗಿವೆ. ಆ ಚಿತ್ರಗಳನ್ನು ಮುಂದೆ ಬೇರೆ ಯಾರಾದರೂ ಟೇಕಾಫ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಖಾಸನೀಸ್ ಸಹೋದರರು ಶುರು ಮಾಡಿದ್ದ ಮತ್ತು ಶುರು ಮಾಡಬೇಕೆಂದಿದ್ದ “ಐರಾ’, “ಶಾದಿಭಾಗ್ಯ’, “ಎಂಟಿವಿ ಸುಬ್ಬುಲಕ್ಷ್ಮೀ’, “ಪ್ರೇಮದಲಿ’, “ಪ್ರೀತಿ ಪ್ರಾಪ್ತಿರಸ್ತು’,“ದಂಡಯಾತ್ರೆ’, “ಉತ್ಸವ್’, “ಸೆಕೆಂಡ್ ಬಕೆಟ್ ಬಾಲ್ಕನಿ’ ಮುಂತಾದ ಚಿತ್ರಗಳೆಲ್ಲಾ ನಿಂತು ಹೋಗಿವೆ. ಹೇಗೆ ಒಂದೇ ನಿರ್ಮಾಣ ಸಂಸ್ಥೆಯು 10 ಚಿತ್ರಗಳನ್ನು ಒಂದರ ಹಿಂದೊಂದು ಪ್ರಾರಂಭಿಸುವ ಮೂಲಕ ಒಂದು ದಾಖಲೆ ಎಂದು ಸುದ್ದಿಯಾಯಿತೋ, ಅದೇ ರೀತಿ ಒಟ್ಟಿಗೇ 10 ಚಿತ್ರಗಳು ನಿಂತು ಹೊಸ ದಾಖಲೆಯಾಗಿದೆ ಎಂದರೆ ತಪ್ಪಿಲ್ಲ.
Related Articles
Advertisement
ಸುದೀಪ್ ವಿಷಯದಲ್ಲೂ ಅದೇ ಆಯಿತು. ಅವರು ಕೆಲವು ವರ್ಷಗಳ ಹಿಂದೆ ಶುರು ಮಾಡಿದ “ಕನ್ವರ್‌ಲಾಲ್’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಕಾಲ ನಡೆದು ನಿಂತು ಹೋಗಿತ್ತು. ಪುನೀತ್ ರಾಜಕುಮಾರ್ ಅಭಿನಯದ “ಮಯೂರ’ ಎಂಬ ಚಿತ್ರದ ಮುಹೂರ್ತ ಇಸ್ಕಾನ್ ದೇವಸ್ಥಾನದಲ್ಲಿ ಭರ್ಜರಿಯಾಗಿ ನಡೆದಿತ್ತು. ಆದರೆ, ನಿರ್ದೇಶಕ ಶೋಭನ್ ಅವರ ನಿಧನದಿಂದಾಗಿ ಚಿತ್ರ ನಿಂತೇ ಹೋಯಿತು. ದರ್ಶನ್ ಅವರ ಲಿಸ್ಟ್ ನಲ್ಲಿ ಅಂಥ ಯಾವುದೇ ಸಿಗುವುದಿಲ್ಲವಾದರೂ, 12-13 ವರ್ಷಗಳ ಹಿಂದೆ, ದರ್ಶನ್ ಅವರು “ರೈ’ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಪಿ. ಧನರಾಜ್ ನಿರ್ಮಿಸಬೇಕಿದ್ದ ಈ ಚಿತ್ರದ ಪತ್ರಿಕಾಗೋಷ್ಠಿ ಸಹ ಆಗಿತ್ತು. ಈ ಚಿತ್ರ ಸಹ ಕಾರಣಾಂತರದಿಂದ ಶುರುವಾಗಲಿಲ್ಲ. ಆದಿತ್ಯ ವಿಷಯದಲ್ಲೂ ಹಾಗೆಯೇ ಆಯಿತು. ಆದಿತ್ಯ ಅಭಿನಯದ “ರಕ್ತಾಕ’, “ಕಾಟನ್‌ಪೇಟೆ’, “ಮಾಸ್’ ಮತ್ತು “ರ್ಯಾಸ್ಕಲ್’ ಎಂಬ ನಾಲ್ಕು ಚಿತ್ರಗಳು ಅದ್ಧೂರಿಯಾಗಿ ಮುಹೂರ್ತವಾಗಿ ಒಂದಿಷ್ಟು ಚಿತ್ರೀಕರಣ ಸಹ ಆಗಿತ್ತು. ಆದರೆ, ಅದ್ಯಾಕೋ ಈ ನಾಲ್ಕೂ ಚಿತ್ರಗಳು ಇದುವರೆಗೂ ಬಿಡುಗಡೆಯಾಗುತ್ತಿರುವ ಸುದ್ದಿ ಬಂದಿಲ್ಲ.
ಇನ್ನು ಇತಿಹಾಸದುದ್ದಕ್ಕೂ ಈ ತರಹ ಹಲವು ಸಿನಿಮಾಗಳು ಸಿಗುತ್ತವೆ. ಡಾ. ರಾಜಕುಮಾರ್ ಅಭಿನಯದ “ಭಕ್ತ ಅಂಬರೀಶ’ ಮತ್ತು “ಕುಮಾರರಾಮ’ ಚಿತ್ರಗಳು ಮುಹೂರ್ತವೂ ಆಗಿತ್ತು. “ಭಕ್ತ ಅಂಬರೀಶ’ ಚಿತ್ರವನ್ನು ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿ, ಹಿರಿಯ ನಿರ್ದೇಶಕ ವಿಜಯ್ ಅವರು ನಿರ್ದೇಶಿಸಬೇಕಿತ್ತು. ಈ ಚಿತ್ರ ಮುಹೂರ್ತವಾಗಿದ್ದಷ್ಟೇ, ಶುರುವಾಗಲಿಲ್ಲ. ಇನ್ನು ಡಾ. ರಾಜಕುಮಾರ್ ಅವರು ಬಹಳ ಆಸೆಪಟ್ಟು ಮಾಡಬೇಕೆಂದಿದ್ದ “ಕುಮಾರರಾಮ’ ಚಿತ್ರವನ್ನು ಶಿವರಾಜಕುಮಾರ್ ಮಾಡಿ ತಮ್ಮ ತಂದೆಯ ಆಸೆಯನ್ನು ಪೂರೈಸಿದ್ದರು. ಇನ್ನು ಶಿವರಾಜಕುಮಾರ್ ಅವರು ಟಿ.ಎಸ್. ನಾಗಾಭರಣ ಅವರ ನಿರ್ದೇಶನದಲ್ಲಿ ನಟಿಸಿದ “ಗೆಳೆಯ ಗೆಳೆಯ’ ಚಿತ್ರದ ಚಿತ್ರೀಕರಣವಾಗಿ ನಿಂತರೆ, ನಾಗಾಭರಣ ನಿರ್ದೇಶನದ “ಶುಭಕಾಲ ಬರ್ತೈತೆ’ ಎಂಬ ಚಿತ್ರ ಸಹ ಬಹುತೇಕ ಮುಗಿದು ನಿಂತು ಹೋಗಿತ್ತು. ಹಂಸಲೇಖ ಅವರ ಮಗ ಅಲಂಕಾರ್ ಅಭಿನಯದ ಮೊದಲ ಚಿತ್ರ “ಸುಗ್ಗಿ’ ಸಹ ಇದೇ ಸಾಲಿಗೆ ಸೇರುವ ಇನ್ನೊಂದು ಚಿತ್ರ. ಈ ಚಿತ್ರವನ್ನು ಎಸ್. ಮಹೇಂದರ್ ಆರಂಭದಲ್ಲಿ ಶುರು ಮಾಡಿ, ಆ ನಂತರ ಹಂಸಲೇಖ ಅವರು ಟೇಕ್‌ಓವರ್ ಮಾಡಿದ್ದರು. ಈ ಚಿತ್ರದ ಕೆಲಸಗಳೆಲ್ಲಾ ಮುಗಿದರೂ ಈ ಚಿತ್ರ ಬಿಡುಗಡೆಯಾಗಲಿಲ್ಲ.
ಇದು ಶುರುವಾಗಿ ನಿಂತ ಹಲವು ಚಿತ್ರಗಳ ಪೈಕಿ ಕೆಲ ಉದಾಹರಣೆಯಾದರೆ, ಬರೀ ಸುದ್ದಿ ಮಾಡಿ, ನಿಂತು ಹೋದ ಚಿತ್ರಗಳ ಸಂಖ್ಯೆಯೂ ಸಾಕಷ್ಟಿವೆ. “ಗಂಡುಗಲಿ ಕುಮಾರರಾಮ’ ನಂತರ ಪಟ್ಟಾಭಿರಾಮ್ ಅವರು ಘೋಷಿಸಿದ್ದ “ಭರತೇಶ ವೈಭವ’, ಶಿವಾರಾಜಕುಮಾರ್-ರಾಘವೇಂದ್ರ ರಾಜಕುಮಾರ್-ಪುನೀತ್ ರಾಜಕುಮಾರ್ ಒಟ್ಟಾಗಿ ಅಭಿನಯಿಸಿದ್ದ “ಓಂ’, ಡಾ. ವಿಷ್ಣುವರ್ಧನ್ ಮತ್ತು ಉಪೇಂದ್ರ ಒಟ್ಟಾಗಿ ನಟಿಸಬೇಕಿದ್ದ “ಯುಗೇ ಯುಗೇ’, ಕುಮಾರ್ ಬಂಗಾರಪ್ಪ ಅಭಿನಯದಲ್ಲಿ ನಾಗಾಭರಣ ನಿರ್ದೇಶಿಸಬೇಕಿದ್ದ “ಕೆಳದಿ ಶಿವಪ್ಪನಾಯಕ’, ತ.ರಾ.ಸು ಅವರ ಮೂರು ಕಾದಂಬರಿಗಳನ್ನಾಧರಿಸಿದ ಟಿ.ಎಸ್. ನಾಗಾಭರಣ ಅವರು ಪ್ರಕಾಶ್ ರೈ ಅಭಿನಯದಲ್ಲಿ ನಿರ್ದೇಶಿಸಬೇಕಿದ್ದ “ದಳವಾಯಿ ಮುದ್ದಣ್ಣ’ ಈ ಎಲ್ಲಾ ಚಿತ್ರಗಳು ಆಯಾ ಕಾಲಕ್ಕೆ ಸುದ್ದಿ ಮಾಡಿದ್ದವು. ಆದರೆ, ಈ ಚಿತ್ರಗಳು ಶುರುವಾಗಲೇ ಇಲ್ಲ ಎಂದರೆ ತಪ್ಪಿಲ್ಲ. ಮೊದಲೇ ಹೇಳಿದಂತೆ, ಇದು ಕೆಲವು ಉದಾಹರಣೆಗಳಷ್ಟೇ. ಈ ತರಹದ ಸಾಕಷ್ಟು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಬೇರೆ ಭಾಷೆಯ ಚಿತ್ರರಂಗಗಳಲ್ಲೂ ಸಿಗುತ್ತವೆ. ಒಂದು ದೊಡ್ಡ ಚಿತ್ರ ಶುರುವಾದಾಗ, ಅದರ ಚಿತ್ರತಂಡದವರಿಗಷ್ಟೇ ಅಲ್ಲ, ಪ್ರೇಕ್ಷಕರಿಗೂ ಆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಚಿತ್ರ ನಿಂತಾಗ, ಚಿತ್ರ ಮತ್ತು ನಿರೀಕ್ಷೆಗಳೆರಡೂ ನೆನಪಾಗಷ್ಟೇ ಉಳಿಯುತ್ತವೆ. ಅಂತಹ ನೆನಪುಗಳನ್ನು ಮೆಲಕು ಹಾಕುವ ಪ್ರಯತ್ನವೇ ಇದು.
– ಚೇತನ್ ನಾಡಿಗೇರ್