Advertisement

ಅಪಘಾತ ತಡೆಯಲು ರಸ್ತೆ ಅಭಿವೃದ್ಧಿ ನಿಗಮದಿಂದ ಕ್ರಮ

11:22 PM Mar 02, 2021 | Team Udayavani |

ಕಡಬ: ಪದೇ ಪದೆ ಅಪಘಾತಗಳಿಂದಾಗಿ ಸುದ್ದಿಯಾಗುತ್ತಿದ್ದ ಉಪ್ಪಿನಂಗಡಿ- ಕಡಬ ರಾಜ್ಯ ಹೆದ್ದಾರಿಯ ಹೊಸಮಠ ಸೇತುವೆ ಬಳಿಯ ಹಂಪ್‌(ರಸ್ತೆ ಉಬ್ಬು)ಗೆ ಬಣ್ಣ ಬಳಿದು ರಿಫ್ಲೆಕ್ಟರ್‌ಗಳನ್ನು ಅಳವಡಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌)ಮುಂದಾಗಿದೆ.

Advertisement

ಹೊಸಮಠ ಸೇತುವೆ ಬಳಿಯ ಹಂಪ್‌ನಿಂದಾಗಿ ಅಪಘಾತಗಳು ನಡೆದು ಜೀವ ಹಾನಿಯಾಗಿರುವ ಬಗ್ಗೆ ಉದಯವಾಣಿ ಸುದಿನ ತನ್ನ ಮಾ. 1ರ ಸಂಚಿಕೆಯಲ್ಲಿ ಪ್ರಕಟಿಸಿದ ಸಚಿತ್ರ ವರದಿಯನ್ನು ಗಮನಿಸಿ, ಮಾಹಿತಿ ನೀಡಿದ ಕೆಆರ್‌ಡಿಸಿಎಲ್‌ ಹಾಸನ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹೇಮಂತ್‌, ವಾಹನ ಚಾಲಕರಿಗೆ ಹಂಪ್‌ ದೂರದಿಂದಲೇ ಕಾಣಿಸುವಂತೆ ಹಳದಿ ಮತ್ತು ಬಿಳಿ ಬಣ್ಣ ಬಳಿಯಲಾಗುತ್ತಿದೆ. ರಾತ್ರಿ ಕಾಣಿಸುವಂತೆ ಹಂಪ್‌ ಬಳಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗುವುದು.

ಸೇತುವೆ ನಿರ್ಮಾಣವಾದ ಆರಂಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಊರವರ ಬೇಡಿಕೆಯಂತೆ ವೈಜ್ಞಾನಿಕ ರೀತಿಯಲ್ಲಿ ಹಂಪ್‌ಗ್ಳನ್ನು ರಚಿಸಲಾಗಿತ್ತು. ಹಂಪ್‌ನಿಂದಾಗಿಯೇ ಅಪಘಾತ ಸಂಭವಿಸುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಹಂಪ್‌ನಲ್ಲಿ ಸ್ವಲ್ಪ ಮಾರ್ಪಾಡು ಮಾಡಲಾಗಿತ್ತು. ಆಗ ಬಳಿಯಲಾಗಿದ್ದ ಬಣ್ಣ ಮಾಸಿ ಹೋಗಿ ಹಂಪ್‌ ಸರಿಯಾಗಿ ಗೋಚರಿಸದೆ ಅಪಘಾತ ಸಂಭವಿಸುತ್ತಿದೆ ಎನ್ನುವ ಕಾರಣಕ್ಕಾಗಿ ಮತ್ತೆ ಬಣ್ಣ ಬಳಿದು ರಿಫ್ಲೆಕ್ಟರ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಜಾಗ್ರತ ಫಲಕಗಳನ್ನೂ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಭೇಟಿ ನೀಡಿದ ಪುತ್ತೂರು ಆರ್‌ಟಿಒ ಶ್ರೀಧರ ರಾವ್‌ ಹಾಗೂ ಕಡಬ ಆರಕ್ಷಕ ಆರಕ್ಷಕ ಉಪನಿರೀಕ್ಷಕ ರುಕ್ಮ ನಾಯ್ಕ ಸಲಹೆ ನೀಡಿದ್ದಾರೆ.

ಹೆಲ್ಮೆಟ್‌ ಕಡ್ಡಾಯ
ರಸ್ತೆ ಸಾರಿಗೆ ನಿಯಮಗಳನ್ನು ಪಾಲಿಸುವುದರಿಂದ ಹೆಚ್ಚಿನ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಬಹುತೇಕ ಸಂದರ್ಭಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದಿರುವುದು ಅಪಘಾತದ ವೇಳೆ ಜೀವಹಾನಿಗೆ ಕಾರಣವಾಗಿರುವುದು ಕಂಡುಬಂದಿದೆ. ಆದ್ದರಿಂದ ಹಿಂಬದಿ ಸವಾರರೂ ಸೇರಿದಂತೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸೂಕ್ತ ದಾಖಲೆಗಳನ್ನು ಇರಿಸಿಕೊಳ್ಳದ ಮತ್ತು ಸಾರಿಗೆ ನಿಯಮ ಪಾಲಿಸದ ವಾಹನ ಚಾಲಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು.
-ರುಕ್ಮ ನಾಯ್ಕ, ಕಡಬ ಆರಕ್ಷಕ ಉಪನಿರೀಕ್ಷಕರು.

Advertisement

Udayavani is now on Telegram. Click here to join our channel and stay updated with the latest news.

Next