Advertisement

“ಕಾಂಗ್ರೆಸ್‌ ನಿರ್ಧಾರ ಆಧರಿಸಿ ಕ್ರಮ’

10:53 PM Nov 09, 2019 | Sriram |

ಮಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಅತಂತ್ರ ಸ್ಥಿತಿಗೆ ತಲುಪಿದರೆ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರವನ್ನು ಅವಲಂಬಿಸಿ ಜೆಡಿಎಸ್‌ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹೇಳಿದ್ದಾರೆ.

Advertisement

ಶನಿವಾರ ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ ಜತೆಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್‌ನ್ನು ನಿರ್ಲಕ್ಷಿಸಿ ಯಾರೂ ಸರಕಾರ ರಚನೆ ಮಾಡಲು ಸಾಧ್ಯವಾಗದು ಎನ್ನುವುದು ನಮ್ಮ ಭಾವನೆ. ಈಗ ಮಹಾರಾಷ್ಟ್ರದಲ್ಲಿನ ಪರಿಸ್ಥಿತಿ ನೋಡಿದರೆ ಇದು ಎಲ್ಲರಿಗೂ ಅರ್ಥವಾಗುತ್ತದೆ ಎಂದರು.

2020ರಲ್ಲಿ ಮಧ್ಯಾಂತರ ಚುನಾವಣೆ?
2020ರಲ್ಲಿ ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ಘೋಷಣೆಯಾದರೂ ಅಚ್ಚರಿ ಇಲ್ಲ. ಉಪಚುನಾವಣೆ, ಮಧ್ಯಾಂತರ ಚುನಾವಣೆ ಬಂದರೂ ಜೆಡಿಎಸ್‌ ಮಾತ್ರ ಏಕಾಂಗಿಯಾಗಿ ಸ್ಪರ್ಧೆ ಎದುರಿಸಲಿದೆ ಎಂದು ತಿಳಿಸಿದರು.ನಾನು ಈ ಇಳಿವಯಸ್ಸಿನಲ್ಲೂ 3 ತಿಂಗಳು ಪೂರ್ತಿ ರಾಜ್ಯವ್ಯಾಪಿ ಓಡಾಟ ನಡೆಸಿ ಪಕ್ಷವನ್ನು ಉಳಿಸಿ, ಬಲಗೊಳಿಸುತ್ತೇನೆ ಎಂದರು.

ಬಿಜೆಪಿ ಬಗ್ಗೆ ಮೃದು ನೀತಿ ಇಲ್ಲ
ಇತ್ತೀಚಿನ ದಿನಗಳಲ್ಲಿ ನಾನು ಬಿಜೆಪಿಗೆ ಬಗ್ಗೆ ಮೃದು ನೀತಿ ಹೊಂದಿದ್ದೇನೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ನಾನು ಅಥವಾ ನಮ್ಮ ಪಕ್ಷ ಅಂತಹ ನಿಲುವನ್ನು ಹೊಂದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

Advertisement

ನಮ್ಮ ಬಗ್ಗೆ ಸಿದ್ದರಾಮಯ್ಯ ಈ ಹಿಂದೆ ಲಘು ವಾಗಿ ಮಾತನಾಡಿದ್ದರು. ಆ ಬಳಿಕ ನಾನು ಬಿಜೆಪಿಯ ಬಲ ತಗ್ಗಿಸಲು ಒಂದಾಗುವಂತೆ 3 ಬಾರಿ ಸಿದ್ದರಾಮಯ್ಯ ಜತೆ ಮಾತನಾಡಿದ್ದೇನೆ. ಆದರೆ ಅವರಿಗೆ ವಿಪಕ್ಷ ನಾಯಕನಾಗುವ, ಯಡಿಯೂರಪ್ಪ ಅವರಿಗೆ ಸಿಎಂ ಆಗುವ ಪ್ರಬಲ ಆಕಾಂಕ್ಷೆ ಇತ್ತು. ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಅವರೂ ಪರೋಕ್ಷ ಕಾರಣ ಎಂದು ಗೌಡರು ಆರೋಪಿಸಿದರು.

ಅತೃಪ್ತರ ಜತೆ ಮಾತುಕತೆ
ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದಾಗ ಸಚಿವ ಸ್ಥಾನ ನೀಡದ ಬಗ್ಗೆ ಕೆಲವು ಶಾಸಕರಿಗೆ ಅತೃಪ್ತಿ ಇದೆ. ಅನಂತರ ಅಪಸ್ವರ ಎತ್ತಿದ ಹಿರಿಯ ಮುಖಂಡ ಬಸವ ರಾಜ ಹೊರಟ್ಟಿ ಸೇರಿದಂತೆ ಅಸಮಾಧಾನಿತರ ಜತೆ ನ. 12ರಿಂದ 14ರ ವರೆಗೆ ನಡೆಯುವ ಪಕ್ಷದ ಸಭೆಯಲ್ಲಿ ಇತ್ಯರ್ಥ ಪಡಿಸಲಾಗುವುದು. ಎಲ್ಲರನ್ನೂ ಸೇರಿಸಿ ಕೊಂಡು ಪಕ್ಷವನ್ನು ಮತ್ತೆ ಸಂಘಟಿಸುತ್ತೇವೆ ಎಂದು ಗೌಡರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next