ಹುನಗುಂದ: ಕೋವಿಡ್ ರೋಗ ನಿಯಂತ್ರಣಕ್ಕೆ ಬರುವವರೆಗೂ ಮತ್ತು ನಮ್ಮ ತಾಲೂಕಿಗೆ ಹರಡಬಾರದೆಂದು ಮುಂಜಾಗ್ರತಾ ಕ್ರಮವಾಗಿ ತರಕಾರಿ ಸೇರಿದಂತೆ ಇನ್ನುಳಿದ ವ್ಯಾಪಾರ- ವಹಿವಾಟನ್ನು ಬಸ್ ನಿಲ್ದಾಣ ಪಕ್ಕದಲ್ಲಿರುವ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜ ನಾಗರಾಳ ತಿಳಿಸಿದರು.
ಗುರುವಾರ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಮತ್ತು ತರಕಾರಿ ವ್ಯಾಪಾರಸ್ಥರ ಸಭೆ ನಡೆಸಿ ಅವರು ಮಾತನಾಡಿದರು. ಹುನಗುಂದ-ಇಳಕಲ್ಲ ಅವಳಿ ತಾಲೂಕುಗಳನ್ನು ಹೊರತುಪಡಿಸಿದರೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕೋವಿಡ್ ಹರಡಿದೆ. ಆದರೆ ತಾಲೂಕಿನ ಎಲ್ಲ ರಂಗದ ಜನರ ಸಹಕಾರದಿಂದ ನಮ್ಮಲ್ಲಿ ರೋಗ ಹರಡದೇ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಬೇರೆ ಜಿಲ್ಲೆ-ರಾಜ್ಯದಿಂದಜನರು ನಮ್ಮ ನಗರಗಳಲ್ಲಿ ವ್ಯಾಪಾರ-ವಹಿವಾಟು ನಡೆಸುವುದರಿಂದ ಸೋಂಕು ಹರಡುವ ಸಾಧ್ಯತೆಗಳಿದ್ದು, ತಕ್ಷಣದಿಂದಲೇ ರಸ್ತೆ ಪಕ್ಕದಲ್ಲಿರುವ ಎಪಿಎಂಸಿಗೆ ವ್ಯಾಪಾರ-ವಹಿವಾಟು ಸ್ಥಳಾಂತರಿಸಲಾಗಿದೆ. ಈ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಈ ಮೊದಲು ಬೆಳಗಾವಿ-ರಾಯಚೂರು ಹೆದ್ದಾರಿಯಲ್ಲಿ ನಡೆಯುತ್ತಿದ್ದ ಬೀದಿ ವ್ಯಾಪಾರವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದ್ದು ಆ ಸ್ಥಳದಲ್ಲಿ ಸ್ವಚ್ಛತೆ-ಬೆಳಕು ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಮಾತನಾಡಿ, ಮಾರುಕಟ್ಟೆಯಲ್ಲಿರುವ ಎರಡು ಶೆಡ್‌ಗಳನ್ನು ತೆರವುಗೊಳಿಸಿ ಅಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರ ನಡೆಸಬೇಕು. ಅದೆ ರೀತಿ ಅಲ್ಲಿ ನಡೆಯುತ್ತಿದ್ದ ತರಕಾರಿ ಸವಾಲನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿದೆ. ಎಗ್Y ರೈಸ್, ಫಾಸ್ಟ್ ಫುಡ್ ವ್ಯಾಪಾರ ಅಮರಾವತಿ ರಸ್ತೆಗೆ ಹೊಂದಿರುವ ಬಯಲಿನಲ್ಲಿ ನಡೆಸಬೇಕು. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ನಗರದ ಒಳಭಾಗದಲ್ಲಿ ತಳ್ಳುಗಾಡಿಯಿಂದಲೂ ವ್ಯಾಪಾರ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಮುತ್ತಪ್ಪ ಯಳಗುಂಡಿ, ಜ್ಯೋತಿ ನೆರಬೆಂಚಿ, ಖಾಜೇಸಾಬ ಭಾಗವಾನ್, ದುರಗಪ್ಪ ಭಜಂತ್ರಿ, ಮುನ್ನಾ ಭಾಗವಾನ್, ಮಹ್ಮದ್ ಸೌದಾಗರ, ಬಸ್ಸು ಭಜಂತ್ರಿ, ಮುಜೀಬ್ ಕಲಬುರ್ಗಿ, ಮೈನು ರಜಾದೆ, ಆಶೀಪ್ ಭಾಗವಾನ್, ಸದ್ದಾಂ ಭಾಗವಾನ್ ಇದ್ದರು.