Advertisement

ಕೊಡಗಿನಲ್ಲಿ ಅಕ್ರಮ ಬಾಂಗ್ಲಾದೇಶಿಯವರ ಪತ್ತೆಗೆ ಕ್ರಮ: ಅರಗ ಜ್ಞಾನೇಂದ್ರ

08:36 PM Mar 10, 2022 | Team Udayavani |

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಕಾಫಿ ಎಸ್ಟೇಟ್‌, ರೆಸಾರ್ಟ್‌ ಹಾಗೂ ಕಟ್ಟಡ ನಿರ್ಮಾಣ ಕೆಲಸಗಳಿಗೆ ಅಸ್ಸಾಂ, ಪಶ್ಚಿಮ ಬಂಗಾಲ ರಾಜ್ಯಗಳಿಂದ 8 ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದು, ಅದರಲ್ಲಿ ಬಾಂಗ್ಲಾದೇಶಿಯವರು ಇರಬಹುದು ಎಂಬ ಮಾಹಿತಿ ಇದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು, ಜಿಲ್ಲೆಯಲ್ಲಿ ಮಹಿಳೆಯರೇ ಇರುವ ಮತ್ತು ಒಂಟಿ ಮನೆಗಳಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳು ಅಸ್ಸಾಮಿಗಳ ಸೋಗಿನಲ್ಲಿರುವ ಬಂಗಾಳಿಗಳು ಭಾಗಿಯಾಗಿರುವ ಅನುಮಾನದ ಬಗ್ಗೆ ಕೇಳಿದ್ದಕ್ಕೆ ಗೃಹ ಸಚಿವರು ಉತ್ತರಿಸಿದರು.

ದರೋಡೆ, ಹಲ್ಲೆ ಪ್ರಕರಣಗಳಲ್ಲಿ ಅಸ್ಸಾಮಿಗಳ ಸೋಗಿನಲ್ಲಿರುವ ಬಂಗಾಳಿಗಳು ಭಾಗಿಯಾಗಿರುವುದು ಸರಕಾರದ ಗಮನಕ್ಕೆ ಬಂದಿಲ್ಲ. ಆದರೆ, ಕೊಡಗು ಜಿಲ್ಲೆಗೆ ಅಸ್ಸಾಂ, ಪಶ್ಚಿಮ ಬಂಗಾಲ ಹಾಗೂ ಇತರ ಈಶಾನ್ಯ ಮತ್ತು ಉತ್ತರ ಭಾರತದ ರಾಜ್ಯಗಳಿಂದ 8,615 ಕಾರ್ಮಿಕರು ಬಂದಿದ್ದಾರೆ. ಇವರೆಲ್ಲರೂ ಭಾರತದ ಪ್ರಜೆಗಳಾಗಿದ್ದು, ದೇಶದ ರಾಜ್ಯಗಳ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಹೊಂದಿರುತ್ತಾರೆ. ಇದರಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳು ಇರಬಹುದು. ಇವರ ಪತ್ತೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿನ ಕಾಫಿ ತೋಟ, ಕಟ್ಟಡ, ಹೋಂಸ್ಟೇ, ರೆಸಾರ್ಟ್‌ ಕೆಲಸಗಳಿಗೆ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಕಾರ್ಮಿಕರ ಗುರುತಿನ ಚೀಟಿ, ಖಾಯಂ ವಿಳಾಸ, ಭಾವಚಿತ್ರ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅದರ ಮಾಹಿತಿಯನ್ನು ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಕೊಡಬೇಕು ಎಂದು ಮಾಲಕರಿಗೆ ಸೂಚನೆ ನೀಡಲಾಗಿದೆ.

ಒಂಟಿ ಮಹಿಳೆಯರ ಮನೆಗಳಲ್ಲಿ ನಡೆಯುವ ದರೋಡೆ, ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ಪ್ರತಿ ಠಾಣ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯರು ವಾಸ ಮಾಡುವ ಮನೆಗಳ ಮಾಹಿತಿ ಸಂಗ್ರಹಿಸಿ ಆವರ ಮನೆ ಬಳಿ ಪೊಲೀಸ್‌ ಬೀಟ್‌ ಪಾಯಿಂಟ್‌ ಪುಸ್ತಕ ಇಡಲಾಗುತ್ತದೆ. ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ. 560 ಗ್ರಾಮಗಳಲ್ಲಿ ಗ್ರಾಮ ಗಸ್ತು ಕರ್ತವ್ಯಕ್ಕೆ ಸಿಬಂದಿ ನಿಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next