Advertisement

ಮನೆಪಾಠ ಹೆಸರಲ್ಲಿ ನಡೆಸುವ ಶಾಲೆಗಳ ವಿರುದ್ಧ ಕ್ರಮ

12:49 PM May 25, 2018 | |

ಸಿಂದಗಿ: ಮನೆಪಾಠ ಹೆಸರಿನಲ್ಲಿ ಅನಧಿಕೃತ ಶಾಲೆ ಮತ್ತು ವಸತಿ ಶಾಲೆ ನಡೆಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್‌ ಬಿರಾದಾರ ಹೇಳಿದರು.

Advertisement

ಗುರುವಾರ ಪಟ್ಟಣದ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯದಲ್ಲಿ ತಾಲೂಕಿನ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಸ್ಥರ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ)ಗಳಿಗೆ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ನಿಯಮಾನುಸಾರ ಅನುದಾನರಹಿತ ಪ್ರಾಥಮಿಕ ಹಾಗೂ
ಪ್ರೌಢಶಾಲೆಗಳು ಮೂಲಭೂತ ಸೌಕರ್ಯ ಹೊಂದಿರಬೇಕು. ಎಲ್ಲಿ ಅನುಮತಿ ಪಡೆದಿರುತ್ತಿರೋ ಅಲ್ಲೇ ಶಾಲೆ ನಡೆಸಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಲು ಟಿಇಟಿ (ಶಿಕ್ಷಕ ಅರ್ಹತಾ ಪರೀಕ್ಷೆ) ಪಾಸಾದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದರು. 

ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೋಚಿಂಗ್‌ ಹೆಸರಿನಲ್ಲಿ ಅನಧಿಕೃತವಾಗಿ ಶಾಲೆ ಮತ್ತು ವಸತಿ ಶಾಲೆಗಳನ್ನು ನಡೆಸುತ್ತಿರುವ ಮಾಹಿತಿ ತಿಳಿದು ಬಂದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅಂತಹ ಶಾಲೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆನಧಿಕೃತ ಶಾಲೆಗಳನ್ನು ಗುರುತಿಸಲು ಸಿಆರ್‌ ಪಿಗಳಿಗೆ ಸೂಚಿಸಲಾಗುವುದು. ಕಡ್ಡಾಯವಾಗಿ ಇಂಥ ಶಾಲೆಗಳನ್ನು ಗುರುತಿಸಿ ತಮಗೆ ವರದಿ ಒಪ್ಪಿಸಬೇಕು. ಮಾಹಿತಿ ಸಲ್ಲಿಸಲು ಅವರಿಂದ ವಿಳಂಬವಾದಲ್ಲಿ ಅವರನ್ನೇ ಹೊಣೆಗಾರಿಕೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಜೊತೆಗೆ ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಶಿಕ್ಷಣ ಸಂಸ್ಥೆ ನಡೆಸಲು ಆಗುತ್ತಿದ್ದರೆ ನಡೆಸಿ ಇಲ್ಲದಿದ್ದಲ್ಲಿ ಬಂದ್‌ ಮಾಡಿ. ಇಲಾಖೆಯಿಂದ ಅನುಮತಿ ಪಡೆಯದೆ ಕಾನೂನು ಬಾಹಿರ ವಸತಿ ಶಾಲೆ ನಡೆಸಿದರೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು. 

Advertisement

ಮಕ್ಕಳಿಂದ ಪಡೆಯುವ ಶಾಲಾ ಫೀ ಮಾಹಿತಿ ವಿವರ ಶಾಲೆಯಲ್ಲಿ ಪ್ರದರ್ಶನ ಮಾಡಬೇಕು. ಅನವಶ್ಯಕವಾಗಿ ಡೊನೇಶನ್‌ ರೀತಿಯಲ್ಲಿ ಪಾಲಕರಿಂದ ಹೆಚ್ಚಿನ ಹಣ ವಸೂಲಿ ಮಾಡಬಾರದು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬೇಕಾಗುವ ಮಾರ್ಗದರ್ಶನ ಪಡೆಯಿರಿ. ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಗಳ ಕಲಿಕೆ ಮೇಲೆ ಹೆಚ್ಚಿನ ಆಸಕ್ತಿ ಮೂಡಿಸಬೇಕು. ಶಿಕ್ಷಕರಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದರು.

ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬಿಳಗಿ, ದೈಹಿಕ ಶಿಕ್ಷಣಾಧಿ ಕಾರಿ ಎ.ಎಂ. ಬಿರಾದಾರ, ಶಿಕ್ಷಣ ಸಂಯೋಜಕ ಎಂ.ಎಫ್‌. ಅರಳಿಮಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ. ಯಡ್ರಾಮಿ, ಎಸ್‌.ಕೆ. ಗುಗ್ಗರಿ, ಆರ್‌.ಬಿ. ರಾಠೊಡ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಮನವಿ: ಸಭೆ ನಂತರ ತಾಲೂಕಿನಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್‌ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ, ಅನಧಿಕೃತ ವಸತಿಶಾಲೆಗಳ ಮಾಹಿತಿಯನ್ನು ಸಿಆರ್‌ ಪಿಗಳಿಂದ ಪಡೆದು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಸ್ಥರು ಕ್ಷೇತ್ರಶಿಕ್ಷಣಾಧಿಕಾರಿ ಆರೀಫ್‌ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next