ಬೀದರ್: ಅಗತ್ಯ ಮೂಲ ಸೌಕರ್ಯಗಳಿಲ್ಲದೇ ಜಿಲ್ಲೆಯಲ್ಲಿ ನಡೆಸುತ್ತಿರುವ ಖಾಸಗಿ ಶಾಲೆಗಳ ಪಟ್ಟಿಯನ್ನು ತಯಾರಿಸಿ ಒಂದು ತಿಂಗಳಲ್ಲಿ ಅಂಥಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಬೀದರ್ ಜಿಲ್ಲೆಯಲ್ಲಿ ಟಿನ್ ಶೆಡ್‌ಗಳಲ್ಲಿ ಶಾಲೆಗಳನ್ನು ನಡೆಸುತ್ತಿರುವ ಕುರಿತು ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಅವರ ದೂರಿನ ಹಿನ್ನಲೆಯಲ್ಲಿ ತಾಲೂಕಿನ ಯಾಕತಪೂರ ಗ್ರಾಮದ ಇನ್‌ಫೆಂಟ್ ಜಿಸೆಸ್ ಪಬ್ಲಿಕ್ ಸ್ಕೂಲ್‌ಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಸೌಲತ್ತುಗಳನ್ನು ಹೊಂದಿರದ ಶಾಲೆಗಳ ತಾಲೂಕುವಾರು ಪಟ್ಟಿಯನ್ನು ಸಿದ್ದಪಡಿಸಿ ಪ್ರಕಟಿಸುವಂತೆ ತಿಳಿಸಿದ್ದೇನೆ. ಮಕ್ಕಳ ಜತೆ ಚೆಲ್ಲಾಟ ಆಡುವುದು ಬೇಡ. ಮಕ್ಕಳ ಯೋಗ ಕ್ಷೇಮ, ಸುಭದ್ರತೆ ಎರಡಕ್ಕೂ ಆದ್ಯತೆ ಕೊಟ್ಟು ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯ ಮನ್ನಾಎಖ್ಖೇಳ್ಳಿಯ ಪ್ರೀಯಾ ಮತ್ತು ನರೇಂದ್ರ ಹಿರಿಯ ಪ್ರಾಥಮಿಕ ಶಾಲೆ, ಭಂಗೂರನ ನೈಟಿಂಗೇಲ್ ಪಬ್ಲಿಕ್ ಶಾಲೆ ಹಾಗೂ ಯಾಕತಪೂರದ ಇನ್‌ಫೆಂಟ್ ಜಿಸೆಸ್ ಪಬ್ಲಿಕ್ ಸ್ಕೂಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಕ್ಕಳ ಆರೋಗ್ಯ ಮತ್ತು ಭದ್ರತೆ ವಿಷಯದಲ್ಲಿ ಶಾಲಾ ಮುಖ್ಯಸ್ಥರಲ್ಲಿ ಕನಿಷ್ಠ ಕಾಳಜಿಯ ಅಭಾವ ಎದ್ದು ಕಾಣಿಸಿದೆ. ವಿದ್ಯಾರ್ಥಿಗಳ ಆರೋಗ್ಯಕ್ಕೆ ತೊಂದರೆಯಾಗುವ ರೀತಿಯಲ್ಲಿ ಟಿನ್‌ಶೆಡ್‌ಗಳಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರವಾಗಿಲ್ಲ: ಸುರೇಶ್ ಕುಮಾರ್ ಸ್ಪಷ್ಟನೆ
ಕನಿಷ್ಠ ಸೌಲಭ್ಯಗಳಿಲ್ಲದ ಅಸುರಕ್ಷಿತ ಶಾಲೆಗಳಿಗೆ ಈಗಾಗಲೇ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಸಾಮಾನ್ಯವಾಗಿ ಶಾಲೆಗಳಿಗೆ ಅನುಮತಿ ನೀಡುವಾಗ ತರಗತಿಗಾಗಿ ಮಕ್ಕಳಿಗೆ ಯೋಗ್ಯ ಕಟ್ಟಡ ಇದೆಯೇ? ಆರೋಗ್ಯಕ್ಕೆ ತೊಂದರೆ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಅನುಮತಿ ಕೊಡುವ ವಿಷಯದಲ್ಲಿ ನಿರ್ಲಕ್ಷ ತೋರಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಹೇಳಿದರು.
ಯಾಕತಪೂರದ ಇನ್‌ಫೆಂಟ್ ಜಿಸೆಸ್ ಪಬ್ಲಿಕ್ ಶಾಲೆಯನ್ನು 2011ರಿಂದ ಟಿನ್‌ಶೆಡ್‌ನಲ್ಲೇ ನಡೆಸಲಾಗುತ್ತಿದೆ. ಕೊವೀಡ್ ಲಾಕ್‌ಡೌನ್ ಸಂದರ್ಭದಲ್ಲಾದರೂ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದಿತ್ತು. ಕಟ್ಟಡ ನಿರ್ಮಾಣದ ಬಳಿಕವಷ್ಟೇ ಶಾಲೆ ಆರಂಭಕ್ಕೆ ಅನುಮತಿ ಕೊಡಲಾಗುವುದು ಎಂದು ಈ ವೇಳೆ ಶಾಲಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ