Advertisement

ಪಕ್ಷ ಸೋಲಿಸಿದವರ ವಿರುದ್ಧ ಕ್ರಮ 

02:06 PM May 20, 2018 | Team Udayavani |

ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಹೇಳಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Advertisement

ಇದಕ್ಕೂ ಮುನ್ನ ಮಾತನಾಡಿದ ನಗರಪಾಲಿಕೆ ಸದಸ್ಯ ಪ್ರಶಾಂತ್‌ ಗೌಡ, ಕಾಂಗ್ರೆಸ್‌ ಪಕ್ಷದಲ್ಲಿ ಶ್ರಮಪಟ್ಟು ದುಡಿಯುವವರು ಬೇರೆ, ಅಧಿಕಾರ ಅನುಭವಿಸುವವರು ಬೇರೆ. ಸರ್ಕಾರ ಒಳ್ಳೆ ಕಾರ್ಯಕ್ರಮ ಕೊಟ್ಟಿದ್ದರೂ ಫ‌ಲಿತಾಂಶ ನೋಡಿದರೆ ನಿಷ್ಠಾವಂತ ಕಾರ್ಯಕರ್ತರಾದ ತಮಗೆ ನೋವಾಗುತ್ತೆ.

ನಿಗಮ-ಮಂಡಳಿ ಅಧ್ಯಕ್ಷರಾಗಿದ್ದು, ಮೀರ್‌ ಸಾದಿಕ್‌ ಕೆಲಸ ಮಾಡಿ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ರಾಜಾರೋಷವಾಗಿ ಹೊರಗೆ ಓಡಾಡುತ್ತಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿರಿ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ತಮ್ಮಿಂದ ಸ್ಪಷ್ಟ ಉತ್ತರ ಬರದಿದ್ದರೆ ಕಾಂಗ್ರೆಸ್‌ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಗುರಿ ತಲುಪಲು ಸೂಚನೆ: ಚುನಾವಣೆಯ ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು. ಗೆಲುವಿಗೆ ಎಲ್ಲರೂ ಹೇಗೆ ಹೊಣೆಗಾರರೋ ಹಾಗೆಯೇ ಸೋತಾಗಲೂ ಎಲ್ಲರೂ ಹೊಣೆ ಹೊರಬೇಕಾಗುತ್ತದೆ. ಒಂದು ಚುನಾವಣೆ ಸೋತ ಮಾತ್ರಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಕಿಲ್ಲ. ಪಕ್ಷ ಜೀವಂತವಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಗುರಿ ಮುಟ್ಟೋಣ ಎಂದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ ಮಾತನಾಡಿ, ವಿಧಾನಸಭೆ ಚುನಾವಣೆಯ ಕಹಿ ಘಟನೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪಕ್ಷಕ್ಕೆ ದ್ರೋಹ ಮಾಡಿದವರ ಬಗ್ಗೆ ಬ್ಲಾಕ್‌ ಸಮಿತಿ ಅಧ್ಯಕ್ಷರು, ಸೋತ ಅಭ್ಯರ್ಥಿಗಳು ನಗರ ಕಾಂಗ್ರೆಸ್‌ ಸಮಿತಿಗೆ ಲಿಖೀತ ಮನವಿ ಸಲ್ಲಿಸಿದರೆ, ಕೆಪಿಸಿಸಿಗೆ ಶಿಫಾರಸು ಮಾಡುವುದಾಗಿ ಹೇಳಿದರು.

Advertisement

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನಂದಿನಿ ಚಂದ್ರಶೇಖರ್‌ ಮಾತನಾಡಿ, ಪಕ್ಷದ ಒಳಗೇ ಇದ್ದು ಮೀರ್‌ ಸಾದಿಕ್‌ ರೀತಿ ಬೆನ್ನಿಗೆ ಚೂರಿ ಹಾಕುವವರಿಂದ ಚುನಾವಣೆಯಲ್ಲಿ ಸೋಲುವಂತಾಗಿದೆ. ಈ ಬಗ್ಗೆ ಎದೆಗುಂದದೆ ಮೆಟ್ಟಿನಿಲ್ಲೋಣ, ಇಂತಹ ಘಟನೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳೋಣ ಎಂದರು.

ನಗರ ಪಾಲಿಕೆ ಸದಸ್ಯ ಶ್ರೀಕಂಠಯ್ಯ ಮಾತನಾಡಿ, ಈಗಾಗಲೇ ವಿಧಾನಸಭಾ ಚುನಾವಣೆ ಸೋಲಿನ ಕಹಿ ಉಂಡಿದ್ದೇವೆ. ಆ ನೋವನ್ನು ಮರೆಯಲು ವಿಧಾನಪರಿಷತ್‌ ಚುನಾವಣೆಯಲ್ಲಿ ಸವಾಲಾಗಿ ಸ್ವೀಕರಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿಯುವ ಮೂಲಕ ಮುನ್ನಡೆಯೋಣ ಎಂದು ವಿವರಿಸಿದರು.

ನಿಗಮ-ಮಂಡಳಿ ಅಧ್ಯಕ್ಷರಾದ ಮಲ್ಲಿಗೆ ವೀರೇಶ್‌, ಬಿ.ಸಿದ್ದರಾಜು, ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್‌, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಾಧಾಮಣಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಚಕ್ಕಡಿ, ಬಸವರಾಜ ನಾಯ್ಕ ಹಾಜರಿದ್ದರು.

ಈ ಹಿಂದೆ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕೆಪಿಸಿಸಿ ಸದಸ್ಯರು ಸೇರಿದಂತೆ 46 ಪದಾಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಹೀಗಾಗಿ ಈ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ 16 ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಂದ ಪಕ್ಷದ ಸೋಲಿಗೆ ನಿಖರವಾದ ಐದು ಕಾರಣಗಳು, ಪಕ್ಷದ ವಿರುದ್ಧ ಕೆಲಸ ಮಾಡಿದವರ ವರದಿ ತರಿಸಿಕೊಳ್ಳುತ್ತಿದ್ದೇನೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಂದ ಲಿಖೀತ ಮನವಿ ಪಡೆದ ನಂತರ ಕ್ರಮ ಕೈಗೊಳ್ಳಲಾಗುವುದು.
-ಡಾ.ಬಿ.ಜೆ.ವಿಜಯಕುಮಾರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next