Advertisement

ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ

11:18 AM Feb 23, 2019 | |

ಶಿವಮೊಗ್ಗ: ಜಿಲ್ಲೆಯ ಮರಳು ಸಮಸ್ಯೆ ಕುರಿತಂತೆ ಶುಕ್ರವಾರ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಗೆ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊನೆಗೂ ಆಗಮಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  ಕಳೆದ ಬಾರಿ ಕರೆದಿದ್ದ ಸಭೆಗೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಗೈರಾಗಿದ್ದರು. ಎಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಭೆ ಸ್ಥಗಿತಗೊಳಿಸಿದ್ದರು. ಮುಂದಿನ ಸಭೆಗೆ ಬರಲೇಬೇಕೆಂದು ಪಟ್ಟು ಹಿಡಿದಿದ್ದರು.

Advertisement

ಅದರಂತೆ ಶುಕ್ರವಾರ ಸಭೆ ಕರೆಯಲಾಗಿತ್ತು. ಆದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ ವರ್ಗಾವಣೆ ಆದೇಶ ಬಂದಿದ್ದರಿಂದ ಬಂದಿರಲಿಲ್ಲ. ವರ್ಗಾವಣೆಯಾಗಿರುವುದರಿಂದ ಯಾರನ್ನಾದರೂ ಕಳುಹಿಸುತ್ತೇವೆ ಎಂದು ಹೇಳಿ ಯಾರನ್ನೂ ಕಳುಹಿಸಿರಲಿಲ್ಲ. ಎಸ್ಪಿ ಹಾಗೂ ಡಿವೈಎಸ್ಪಿಗೆ ವರ್ಗಾವಣೆ ಆಗಿದ್ದರೆ ಪಿ.ಸಿ.ನಾದರೂ ಮಾಹಿತಿ ಕೊಟ್ಟು ಕಳಿಸಬೇಕಿತ್ತು. ಪೊಲೀಸ್‌ ಇಲಾಖೆಯಿಂದ ಯಾರೂ ಬಾರದೆ ಸಭೆಗೆ ಅವಮಾನ ಮಾಡಲಾಗಿದೆ ಎಂದು ಜಿಪಂ ಸದಸ್ಯ ಕೆ.ಇ. ಕಾಂತೇಶ್‌ ಆರೋಪಿಸಿದರು.

ಪ್ರತಿ ಲೋಡ್‌ ಮರಳಿಗೆ 25 ರಿಂದ30 ಸಾವಿರ ರೂ. ಪಡೆಯಲಾಗುತ್ತಿದೆ. 1 ಪರವಾನಗಿ ಪಡೆದು ಏಳೆಂಟು ಲೋಡ್‌ ಮರಳು ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತ ಗುರುತಿಸಿರುವ ಜಾಗ ಬಿಟ್ಟು ಬೇರೆ ಕಡೆ ಮರಳು ತೆಗೆಯುತ್ತಿದ್ದಾರೆ. ಇದರಿಂದ ಇದ್ಯಾವುದೂ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗುತ್ತಿಲ್ಲ. ಅಕ್ರಮ ಮರಳು ದಂಧೆಯಿಂದಾಗಿ ಬಡವರಿಗೆ ಮರಳು ಸಿಗದೆ ಮರಳಿನ ದರ ಚಿನ್ನದಂತಾಗಿದೆ ಎಂದರು.

 ಸಭೆಗೆ ಮಾಹಿತಿ ನೀಡಲು ಯಾರೂ ಬಾರದಿರುವುದು ನೋಡಿದರೆ ಪೊಲೀಸ್‌ ಇಲಾಖೆಯೇ ಇಲ್ಲ ಎನ್ನಿಸುತ್ತದೆ. ಪರಿಸ್ಥಿತಿ ಹೀಗಾದರೆ ಇಲಾಖಾ ಕಚೇರಿಗೆ ಬೀಗ ಹಾಕಲಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. 

 ಮಾಜಿ ಸಚಿವ, ಶಾಸಕ ಕುಮಾರ್‌ ಬಂಗಾರಪ್ಪ, ಸತತವಾಗಿ ಎಸ್ಪಿ ಅವರು ಜಿಪಂ ಸಭೆಗೆ ಗೈರು ಹಾಜರಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸ್‌ ಇಲಾಖೆ ಮೇಲೆಯೇ ಮರಳು ದಂಧೆಯ ಆರೋಪ ಇರುವುದರಿಂದ ಅವರು ಬರಲೇಬೇಕು ಎಂದರು. ಅಲ್ಲದೆ ಸೊರಬ, ಶಿಕಾರಿಪುರ ಭಾಗದಲ್ಲಿ ಹಳ್ಳಗಳಲ್ಲಿ ಸಿಗುವ ಮರಳನ್ನು ಸ್ಥಳೀಯರು ಬಳಸಲು ಅವಕಾಶ ನೀಡಬೇಕು. ಗಣಿ ಮತ್ತು ಭೂವಿಜ್ಞಾನಿಗಳು ಇದು ಮರಳಲ್ಲ ಮಣ್ಣು ಎಂದು ವರದಿ ನೀಡಿದ್ದರೂ ಇದನ್ನು ಹೊತ್ತೂಯ್ಯುವವರಿಗೆ ಪೊಲೀಸರು ಕಿರಿ ಕಿರಿ ಮಾಡುತ್ತಿದ್ದಾರೆ. ಮೊದಲು ಇದನ್ನು ತಪ್ಪಿಸಬೇಕು. ಇದು ತಪ್ಪಿದರೆ ಮರಳಿನ ಸಮಸ್ಯೆ ಅರ್ಧದಷ್ಟು ಕಡಿಮೆ ಆಗುತ್ತದೆ. ಬೇಕಾದರೆ ರಾಜಸ್ವ ಕಟ್ಟಲು ಸಿದ್ಧವಿದ್ದೇವೆ.

Advertisement

ಜಿಲ್ಲಾಧಿಕಾರಿಗಳು ಇದಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಅವಕಾಶ ನೀಡಲು ನನಗೆ ಅಧಿಕಾರವಿಲ್ಲ. ಈ ಬಗ್ಗೆ ಕಾಯ್ದೆಯಲ್ಲಿ ಅವಕಾಶವಿಲ್ಲ. ಕಳೆದ ಬಾರಿ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಅದನ್ನು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬಜೆಟ್‌ ನಲ್ಲಿ ಈ ಬಗ್ಗೆ ಘೋಷನೆಯಾಗುವ ಸಾಧ್ಯತೆ ಇತ್ತು. ಆದರೆ ಆಗಿಲ್ಲ. 10 ದಿನದಲ್ಲಿ ಏನಾದರೂ ಪರಿಹಾರ ಸಿಗಬಹುದು ಎಂದರು. 

ಸದಸ್ಯರಾದ ಯೋಗೀಶ್‌, ಭೀಮನೇರಿ ಶಿವಪ್ಪ, ಪೂಜಾರ ಮತ್ತಿತರರು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಅದರಲ್ಲೂ ಪೊಲೀಸ್‌ ಇಲಾಖೆಯ ಕೆಲ ಅಧಿಕಾರಿಗಳ ಕೈವಾಡದಿಂದ ಸಮಸ್ಯೆ ಹೆಚ್ಚಾಗಿದೆ ಎಂದು ದೂರಿದರು. ಅಲ್ಲದೆ ಅಕ್ರಮ ಮರಳು ದಂಧೆಗೆ ಸಹಕರಿಸುತ್ತಿರುವ ಪೊಲೀಸ್‌ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದರು. 

ಮರಳು ಲಾರಿಗಳ ಜಿಪಿಎಸ್‌ ಹಾಗೂ ಕ್ವಾರಿಗಳ ಸಿಸಿ ಟಿವಿ ಫೂಟೇಜ್‌ ಗಳನ್ನು ಪರಿಶೀಲಿಸಿ ಅಕ್ರಮವಾಗಿ ಮರಳು ಸಾಗಿಸಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕಾಂತೇಶ್‌ ಒತ್ತಾಯಿಸಿದರು. ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ಮರಳಿನ ಪೂರೈಕೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಸಿಇಒ ಶಿವರಾಮೇ ಗೌಡ ಇದ್ದರು.

ನೀರಿಗಾಗಿ ಧರಣಿ
ಮಳವಳ್ಳಿ ಲಂಬಾಣಿ ತಾಂಡಾದ ನೀರಿನ ಸಮಸ್ಯೆ ಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲಿನ ಜನರಿಗೆ ನೀರು ಯಾಕೆ ಕೊಡುತ್ತಿಲ್ಲ? ಸಮಸ್ಯೆ ಬಗೆಹರಿಸುವವರೆಗೆ ಎದ್ದೇಳುವುದಿಲ್ಲ ಎಂದು ಹೇಳಿ ಸದಸ್ಯರಾದ ನರಸಿಂಗ ನಾಯ್ಕ, ಅನಿತಾಕುಮಾರಿ ಬಾವಿಗಿಳಿದು ಧರಣಿ ಕುಳಿತರು. ಸಿಇಒ ಶಿವರಾಮೇ ಗೌಡ ಮಾತನಾಡಿ, ಅಲ್ಲಿ 60-70 ಕುಟುಂಬಗಳು ಇವೆ ಎಂದು ಹೇಳಲಾಗುತ್ತಿದೆ. ವಾಸ್ತವಾಗಿ ಅಷ್ಟು ಕುಟುಂಬಗಳಿಲ್ಲ ಎಂದು ವರದಿ ನೀಡಿದ್ದಾರೆ. ಸೋಮವಾರ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಡಿಸಿ ಪ್ರತಿಕ್ರಿಯಿಸಿ ಅಲ್ಲಿನ ಕುಟುಂಬಗಳಿಗೆ ಗೋಮಾಳ ಜಮೀನಿನಲ್ಲಿ ಮನೆ ಕಟ್ಟಲು ಅವಕಾಶವಿದೆ. ಅಲ್ಲಿ ಎಷ್ಟು ಕುಟುಂಬಗಳಿವೆ, ಎಷ್ಟು ಜಾಗ ಬೇಕು ಎಂಬ ವರದಿ ಬೇಕು. ಪೂರ್ತಿ ಜಾಗ ಒತ್ತುವರಿಯಾಗುವ ಸಾಧ್ಯತೆ ಎಂದು ಗಮನ ಸೆಳೆದರು. ಅಂತಿಮವಾಗಿ ಧರಣಿ ವಾಪಸ್‌ ಪಡೆದರು.

ಕೊನೆಗೂ ಬಂದ ಎಸ್‌ಪಿ ಕಳೆದ ಸಭೆಗೂ ಗೈರಾಗಿದ್ದ ಎಸ್‌ಪಿ ಈ ಸಭೆಗೆ ಬರುವುದು ಖಾತ್ರಿ ಇರಲಿಲ್ಲ. ಬುಧವಾರವೇ ಅಭಿನವ್‌ ಖರೆ ಅವರಿಗೆ ವರ್ಗಾವಣೆ ಆದೇಶ ಬಂದಿದ್ದರಿಂದ ಸಭೆಗೆ ಬಂದಿರಲಿಲ್ಲ. ಎಎಸ್‌ಪಿ ಮುತ್ತುರಾಜ್‌ ಅವರಿಗೂ ಶುಕ್ರವಾರ ವರ್ಗಾವಣೆಯಾಗಿದ್ದರಿಂದ ಅವರೂ ಬಂದಿರಲಿಲ್ಲ. ಇದರಿಂದ ಕೆರಳಿದ ಸದಸ್ಯರು ಬೆಳಗ್ಗೆ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಮಧ್ಯಾಹ್ನದ ಮೇಲೆ ಸಭೆಗೆ ಕರೆಸಬೇಕು ಎಂದು ಪಟ್ಟು ಹಿಡಿದರು. ಕೊನೆಗೂ ಮಧ್ಯಾಹ್ನದ ವೇಳೆಗೆ ಬಂದ ಎಸ್‌ಪಿ ಡಾ| ಅಶ್ವಿ‌ನಿ, ನಾನು ಹೊಸದಾಗಿ ಬಂದಿದ್ದೇನೆ. ನಿಮ್ಮ ಮಾತುಗಳನ್ನು ಆಲಿಸಿದ್ದೇನೆ. ಮರಳು, ಗಾಂಜಾ, ಅಕ್ರಮ ಮದ್ಯ, ಓಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧಳಿದ್ದೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು
ಭರವಸೆ ನೀಡಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಕುರಿತು ಲೋಕಾಯುಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಕೋರಿ ಜಿಪಂ ಸಾಮಾನ್ಯ ಸಭೆಯಲ್ಲಿ ನಡಾವಳಿ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next