Advertisement

ನಕಲಿ ಬೀಜ ಮಾರಾಟಗಾರ ವಿರುದ್ಧ ಕ್ರಮ: ಬಿ.ಸಿ.ಪಾಟೀಲ್‌

08:22 AM Apr 25, 2020 | mahesh |

ಬೆಂಗಳೂರು: ನಕಲಿ ಬಿತ್ತನೆ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ. ನಕಲಿ ಬಿತ್ತನೆ ಬೀಜ ಮಾರಾಟ ಪ್ರಕರಣಗಳು ವರದಿಯಾಗುತ್ತಿದ್ದು ಇದನ್ನು ಸಹಿಸುವುದಿಲ್ಲ. ರೈತರ ಬದುಕು ನಾಶ ಮಾಡುವ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು
ಹೇಳಿದ್ದಾರೆ.

Advertisement

ಹಾವೇರಿ ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಸುಮಾರು 6 ಕೋಟಿ ರೂ. ಮೌಲ್ಯದ ಅಕ್ರಮ ಬಿಡಿ ಬೀಜಗಳ ದಾಸ್ತಾನು ವಶಪಡಿಸಿಕೊಂಡಿದ್ದು, ಕೃಷಿ ಅಧಿಕಾರಿಗಳ ಕಾರ್ಯ ಶ್ಲಾಘನೀಯ.  ಇಂತಹ ಕಳಪೆ ನಕಲಿ ಬೀಜ ಮಾರಾಟ ಮಾಡುವವರು ಬದುಕಿದ್ದಂತಹ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ತಾವೆಂದಿಗೂ ಸಹಿಸುವುದಿಲ್ಲ. ಕೃಷಿ ಅಧಿಕಾರಿಗಳು ಮತ್ತು ವಿಚಕ್ಷಣಾ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದಾರೆ. ನಕಲಿ ಕಳಪೆ ಅಕ್ರಮ ಬೀಜವಾಗಲಿ ಗೊಬ್ಬರವಾಗಲಿ ಮಾರಾಟ ಮಾಡುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಹಾವೇರಿಯಲ್ಲಿ ಪತ್ತೆಯಾದ ನಕಲಿ ಬಿಡಿ ಬೀಜಗಳ ದಾಸ್ತಾನು ವಶ ಪ್ರಕರಣವನ್ನು ನ್ಯಾಯಾಲಯದ ವಶಕ್ಕೆ
ವಹಿಸಲಾಗುವುದು ಎಂದು ಹೇಳಿದ್ದಾರೆ.

ಕ್ವಿಂಟಾಲ್‌ಗೆ 6100 ರೂ.ನಂತೆ ತೊಗರಿ ಖರೀದಿಸಲು ಆದೇಶ
ಬೆಂಗಳೂರು: ಕೇಂದ್ರ ಸರ್ಕಾರವು 2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿಗೆ ಪ್ರತಿ ಕ್ವಿಂಟಾಲ್‌ ಗೆ 6100 ರೂ. ನಂತೆ ಖರೀದಿಸಲು ಆದೇಶ ನೀಡಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ. ರಾಜ್ಯದಲ್ಲಿ 3.18 ಲಕ್ಷ ರೈತರು ಬೆಂಬಲ ಬೆಲೆ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದು, 2.53 ಲಕ್ಷ ರೈತರಿಂದ 22.75 ಲಕ್ಷ ಕ್ವಿಂಟಾಲ್‌ ತೊಗರಿಯನ್ನು ಈಗಾಗಲೇ ಖರೀದಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್‌ ಮಾತ್ರ ತೊಗರಿ ಖರೀದಿಸಲಾಗಿದ್ದು, ಕೇಂದ್ರ ಸರ್ಕಾರವು ಇನ್ನೂ 5 ಕ್ವಿಂಟಾಲ್‌ ತೊಗರಿಯನ್ನು ಈಗಾಗಲೇ ನೋಂದಾಯಿಸಿಕೊಂಡು ಮಾರಾಟ ಮಾಡಿದ ರೈತರಿಂದ ಖರೀದಿಸಲು ಅನುಮತಿ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯದ 65,316 ಜನ ರೈತರಿಂದ ಬೆಲೆ ಸ್ಥಿರೀಕರಣ ಯೋಜನೆಯಡಿ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್‌ ತೊಗರಿಯನ್ನು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿ ಪ್ರಯೋಜನ ಪಡೆಯದ ರೈತರು ಕೂಡಲೇ ಖರೀದಿ ಕೇಂದ್ರಕ್ಕೆ ಹೋಗಿ ತಾವು ಬೆಳೆದ ತೊಗರಿಯನ್ನು ಪ್ರತಿ ಕ್ವಿಂಟಾಲ್‌ ಗೆ 6100 ರೂ. ರಂತೆ ಬೆಲೆ ಸ್ಥಿರೀಕರಣ ಯೋಜನೆಯಡಿ ಮಾರಾಟ ಮಾಡಬಹದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next