Advertisement

ಸುಸ್ತಿದಾರರ ಮಾನ ಹರಾಜು ಹಾಕಿ 

02:22 PM Mar 14, 2018 | Team Udayavani |

 ನವದೆಹಲಿ/ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀರವ್‌ ಮೋದಿ, ಮೆಹುಲ್‌ ಚೋಸ್ಕಿ 12 ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣ ಭಾರೀ ಸುದ್ದಿಯಾಗಿರುವ ಬೆನ್ನಲ್ಲೇ, ಉದ್ದೇಶ ಪೂರ್ವಕ ಸುಸ್ತಿದಾರರ ವಿವರಗಳನ್ನು ಫೋಟೋ ಸಹಿತ  ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಮೂಲಕ ಅವರ ಮಾನ ಹರಾಜು ಹಾಕುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಹಣಕಾಸು ಖಾತೆ ಪತ್ರ ಬರೆದಿದೆ.

Advertisement

ಇಂಥ ಕ್ರಮ ಕೈಗೊಳ್ಳುವ ಮುನ್ನ ಬ್ಯಾಂಕ್‌ಗಳ ಆಡಳಿತ ಮಂಡಳಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಯಾವ ರೀತಿಯಲ್ಲಿ ಅಂಥವರ ಮಾಹಿತಿ ಪ್ರಕಟಿಸಬೇಕು ಎಂಬ ಬಗ್ಗೆ ನಿಯಮವನ್ನು ಆಯಾ ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅಂಗೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

2017ರ ಡಿಸೆಂಬರ್‌ ಅಂತ್ಯಕ್ಕೆ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ 9,063ಕ್ಕೆ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 1,10,500 ಕೋಟಿ ರೂ.ಗಳಷ್ಟು ಬಾಕಿ ಬರಬೇಕಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶಿವಪ್ರತಾಪ್‌ ಶುಕ್ಲಾ ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಕೇಂದ್ರ ಸರ್ಕಾರ 50 ಕೋಟಿ ರೂ. ಮೀರಿದ ಸಾಲ ಪಡೆಯುವವರ ಪಾಸ್‌ಪೋರ್ಟ್‌ ವಿವರ ಪಡೆದುಕೊಳ್ಳಬೇಕು. ಅದಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳ ಸಾಲದ ಅರ್ಜಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಎಲ್‌ಒಯು ರದ್ದು: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ, ನೀರವ್‌ ಮೋದಿ, ಮೆಹುಲ್‌ರಂಥ ಉದ್ದಿಮೆದಾರರು ಬ್ಯಾಂಕ್‌ಗಳಿಗೆ ವಂಚಿಸುವುದನ್ನು ತಪ್ಪಿಸಲು ಲೆಟರ್‌ ಆಫ್ ಅಂಡರ್‌ಟೇಕಿಂಗ್‌ (ಎಲ್‌ಒಯು), ಲೆಟರ್‌ ಆಫ್ ಕ್ರೆಡಿಟ್‌ (ಎಲ್‌ಒಸಿ) ವ್ಯವಸ್ಥೆ ರದ್ದು ಮಾಡಿ ಆರ್‌ಬಿಐ ಪ್ರಕಟಣೆ ಹೊರಡಿಸಿದೆ. ತಕ್ಷಣವೇ ಅದು ಜಾರಿಯಾಗಲಿದ್ದು, ವಿಶೇಷವಾಗಿ ಆಮದು ಕ್ಷೇತ್ರಕ್ಕೆ ಅನ್ವಯವಾಗುತ್ತದೆ ಎಂದು ಪ್ರಕಟಿಸಿದೆ.

Advertisement

ಸಾವಿರ ಮೀರಿದ ನಕಲಿ ಖಾತರಿ: ಈ ನಡುವೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯಸಭೆಗೆ ಲಿಖೀತ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ , ಮುಂಬೈನಲ್ಲಿರುವ ಬ್ರಾಡಿ ಹೌಸ್‌ ಶಾಖೆಯಿಂದ ನೀರವ್‌ ಮೋದಿ ಮೊದಲ ಬಾರಿಗೆ ನಕಲಿ ಖಾತರಿ ಪಡೆದಿದ್ದು 2011ರ ಮಾ.10ರಂದು. ನಂತರದ 74 ತಿಂಗಳುಗಳಲ್ಲಿ 1,212 ಖಾತರಿಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಹಲವರನ್ನು ದೂರಬೇಕಿದೆ
ಹಗರಣದ ಬಗ್ಗೆ ಮಾತಾಡಿರುವ ಆರ್‌ಬಿಐ ನಿವೃತ್ತ ಗವರ್ನರ್‌ ಡಾ.ರಘುರಾಮ್‌ ರಾಜನ್‌, “ಹಗರಣಕ್ಕೆ ಹಲವ ರನ್ನು ದೂರಬೇಕಾಗಿದೆ’ ಎಂದಿದ್ದಾರೆ. ಹಗರಣಕ್ಕೆ ಕಾರ ಣರಾದ ಆಡಳಿತ ಮಂಡಳಿ ನಿರ್ದೇಶಕರನ್ನು ಯಾರು ನೇಮಿಸಿದ್ದು ಎಂದು ತಿಳಿಯಬೇಕಾಗಿದೆ. ಜತೆಗೆ ಆರ್‌ಬಿಐಗೆ ಅದರ ಸುಳಿವು ಸಿಕ್ಕಿರಲಿಲ್ಲ ಎಂದಿದ್ದಾರೆ. ಯುಪಿಎ ಸರ್ಕಾರದ “80:20 ಚಿನ್ನದ ಯೋಜನೆ’ ಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. 

6000 ಕೋಟಿ ವಂಚನೆ?
ಹಿಮಾಚಲ ಪ್ರದೇಶ ಮೂಲದ ದ ಇಂಡಿಯನ್‌ ಟೆಕ್ನೋಮ್ಯಾಕ್‌ ಕಂಪನಿ ಎಂಬ ಸಂಸ್ಥೆಯಿಂದ 6 ಸಾವಿರ ಕೋಟಿ ರೂ. ವಂಚನೆ ನಡೆದಿದೆ ಎಂದು ಸಿಪಿಎಂ ಶಾಸಕ ರಾಕೇಶ್‌ ಸಿಂಘ ಆರೋಪ ಮಾಡಿದ್ದಾರೆ. ಹಿಮಾಚಲ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಂಪನಿ 2,175.51 ಕೋಟಿ ರೂ. ನಷ್ಟು ಮೌಲ್ಯವರ್ಧಿತ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ ಎಂದಿದ್ದಾರೆ. ಜತೆಗೆ ನೌಕರರ ಭವಿಷ್ಯ ನಿಧಿ, ವಿವಿಧ ಬ್ಯಾಂಕ್‌ಗಳಿಗೆ 4 ಸಾವಿರ ಕೋಟಿ ರೂ.ಗಳಷ್ಟನ್ನು ಪಾವತಿ ಮಾಡಬೇಕಾಗಿದೆ ಎಂದೂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next