Advertisement

ಕನ್ನಡದಲ್ಲಿ ಆಭಿನಯಿಸೋಕೆ ಸಿದ್ಧ; ಆಫ‌ರ್‌ ಬರಲೇ ಇಲ್ಲ

11:31 AM Mar 31, 2017 | |

ಬಾಲಿವುಡ್‌ನ‌ ಅತ್ಯಂತ ಪ್ರತಿಭಾವಂತ ಪೋಷಕ ನಟರಲ್ಲೊಬ್ಬರು ಮನೋಜ್‌ ಬಾಜಪೇಯಿ ಅಂದರೆ ತಪ್ಪಿಲ್ಲ. 23 ವರ್ಷಗಳ ಹಿಂದೆ “ದ್ರೋಹ್‌ಕಾಲ್‌’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಅಲ್ಲಿಂದ ಇಲ್ಲಿಯವರೆಗೂ ಅದೆಷ್ಟೋ ವಿಭಿನ್ನ ಚಿತ್ರಗಳಲ್ಲಿ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇವತ್ತೂ ಸಹ ಅವರ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದೆ.

Advertisement

ಅದೇ “ನಾಮ್‌ ಶಬಾನಾ’ “ಬೇಬಿ’ ಚಿತ್ರದ ಪ್ರೀಕ್ವೆಲ್‌ ಆಗಿರುವ ಈ ಚಿತ್ರದಲ್ಲಿ ತಾಪ್ಸಿ ಪನ್ನು, ಅಕ್ಷಯ್‌ ಕುಮಾರ್‌, ಪೃಥ್ವಿರಾಜ್‌, ಅನುಪಮ್‌ ಖೇರ್‌, ಡ್ಯಾನಿ ಮುಂತಾದ ಪ್ರತಿಭಾವಂತ ಕಲಾವಿದರು ಅಭಿನಯಸಿದ್ದು, ತಾಪ್ಸಿ ಗುರುವಾಗಿ ಮನೋಜ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರಮೋಷನ್‌ ಸಲುವಾಗಿ ಗುರುವಾರ ಬೆಂಗಳೂರಿಗೆ ಬಂದಿದ್ದ ಮನೋಜ್‌, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

* “ನಾಮ್‌ ಶಬಾನ’ ಎಂಬ ಹೆಸರು ಕೇಳಿದರೆ ಮಹಿಳಾ ಪ್ರಧಾನ ಚಿತ್ರವೆನಿಸುತ್ತದೆ. ಇಲ್ಲಿ ನಿಮ್ಮ ಪಾತ್ರವೇನು?
ಇದೊಂದು ವಿಭಿನ್ನ ಚಿತ್ರ. ಮಹಿಳಾ ಪ್ರಧಾನ ಚಿತ್ರವೆನ್ನುವುದು ಸಹ ಹೌದು. ತಾಪ್ಸಿ ಪನ್ನು ಈ ಚಿತ್ರದ ನಾಯಕಿ. ನಾವೆಲ್ಲಾ ಅವರನ್ನು ಸಪೋರ್ಟ್‌ ಮಾಡುವ ಪೋಷಕ ಕಲಾವಿದರು. ಈ ಚಿತ್ರದಲ್ಲಿ ಇಂಟಲಿಜೆನ್ಸ್‌ ಇಲಾಖೆ ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸಲಾಗಿದೆ. ಯಾರೋ ಒಬ್ಬರನ್ನು ಟ್ರಾಕ್‌ ಮಾಡಿ, ಅವರಿಗೆ ತರಬೇತಿ ಕೊಟ್ಟು, ಅವರಿಂದ ಅಸಾಧ್ಯವಾದ ಕೆಲಸವನ್ನು ಹೇಗೆ ಮಾಡಿತ್ತಾರೆ ಂಬ ಕಥೆ ಈ ಚಿತ್ರದಲ್ಲಿದೆ. ಇದು ಬರೀ ಕಾಲ್ಪನಿಕ ಕಥೆಯಷ್ಟೇ ಅಲ್ಲ, ಸಾಕಷ್ಟು ರಿಸರ್ಚ್‌ ಮಾಡಿ, ಹಲವು ಘಟಣೆಗಳನ್ನಾಧರಿಸಿ ಈ ಚಿತ್ರ ಮಾಡಲಾಗಿದೆ.

* ಇಷ್ಟು ವರ್ಷಗಳ ಪ್ರಯಾಣದ ಬಗ್ಗೆ ಏನನ್ನುತ್ತೀರಿ?
ಚಿತ್ರ ನೋಡುವ ಪ್ರೇಕ್ಷಕರು ಮತ್ತು ನನಗೆ ಕೆಲಸ ಕೊಡುವ ನಿರ್ದೇಶಕರು ಇಬ್ಬರೂ ಖುಷಿಯಾಗಿದ್ದರೆ, ನನ್ನ ಪ್ರಯಾಣ ಕೂಡಾ ಚೆನ್ನಾಗಿದೆ ಎಂದೇ ಅರ್ಥ. ಅವರಿಬ್ಬರೂ ನನ್ನ ಪಾತ್ರಮತ್ತು ಅಭಿನಯದ ಬಗ್ಗೆ ಖುಷಿಯಾಗಿದ್ದರೆ, ನಾನು ಇನ್ನಷ್ಟು ಸಕ್ರಿಯವಾಗಿರಬಹುದು ಮತ್ತು ಇನ್ನಷ್ಟು ಸವಾಲುಗಳನ್ನು ಎದುರಿಸಬಹುದು. ನಾನು ಯಾವುದೇ ಪಾತ್ರವನ್ನು ರಿಪೀಟ್‌ಮಾಡುವುದಿಲ್ಲ. ಹಾಗೆಯೇ ಕಷ್ಟದ ಪಾತ್ರಗಳಿಗೆ ಹೆದರು ವುದಿಲ್ಲ. ನನಗೆ ಕಷ್ಟದ ಪಾತ್ರಗಳು ಅಂದರೆ ಬಹಳ ಇಷ್ಟ. ಬೆಳಿಗ್ಗೆ ಎದ್ದರೆ, ಅವತ್ತು ಆ ಪಾತ್ರ ಮಾಡಬೇಕು ಎಂಬ ಎಕ್ಸೆ„ಟ್‌ಮೆಂಟ್‌ ಇರಬೇಕು. ಮನೆ ಬಿಟ್ಟು ಹೋಗಬೇಕಾದರೆ ತೃಪ್ತಿ ಇರಬೇಕು. ಇಲ್ಲದಿದ್ದರೆ ನಟಿಸಿ ಏನು ಪ್ರಯೋಜನ. ಹಾಗಾಗಿ ಅಂತಹ ಪಾತ್ರಗಳಿಗೆ ಹುಡುಕಾಟ ನಡೆಸುತ್ತೀನಿ ಮತ್ತು “ನಾಮ್‌ ಶಬಾನ’ದಲ್ಲಿ ಅಂಥದ್ದೊಂದು ಪಾತ್ರವಿದೆ.

* ಇಷ್ಟು ವರ್ಷಗಳಲ್ಲಿ ಕನ್ನಡದಲ್ಲಿ ನಟಿಸಬೇಕು ಅಂತ ಅನಿಸಲಿಲ್ಲವೇ?
ನಿಜ ಹೇಳಬೇಕೆಂದರೆ ಇಲ್ಲಿಂದ ನನಗೆ ಆಫ‌ರ್‌ಗಳು ಬಂದಿಲ್ಲ. ಒಳ್ಳೆಯ ಕಥೆಗಳು ಬಂದರೆ ನಾನ್ಯಾಕೆ ಬೇಡ ಎನ್ನಲಿ. ನನಗೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವುದಕ್ಕೆ ಇಷ್ಟ. ಅದರಿಂದ ಬೇರೆ ಬೇರೆ ಜನರ ಮತ್ತು ಸಂಸ್ಕೃತಿಗಳ ಪರಿಚಯವಾಗುತ್ತದೆ. ಹೋಗೋಕೇನೋ ಇಷ್ಟ. ಆದರೆ, ಆಫ‌ರ್‌ಗಳು ಬಂದಿಲ್ಲ. ತೆಲುಗು ಮತ್ತು ತಮಿಳಿನಲ್ಲಿ ನಟಿಸಿದ್ದೇನೆ. ಇಲ್ಲಿ ಮಾತ್ರ ಅವಕಾಶಗಳು ಸಿಕ್ಕಿಲ್ಲ. ಸಿಕ್ಕರೆ ಖಂಡಿತಾ ಬರುತ್ತೇನೆ. ಅದರಲ್ಲೂ ನನ್ನನ್ನು ಪರೀಕ್ಷಿಸುವ ನಿರ್ದೇಶಕರು ಬಂದರೆ, ಖಂಡಿತಾ ಇಲ್ಲ ಎನ್ನೋಲ್ಲ.

Advertisement

* ಚಿತ್ರಕ್ಕಾಗಿ ನೀವು ಮಾಡಿಕೊಳ್ಳುವ ತಯಾರಿಗಳೇನು?
ನಾಳೆಯಿಂದ ಯಾವುದಾದರೂ ಚಿತ್ರದಲ್ಲಿ ಮಾಡುತ್ತೀನಿ ಎಂದರೆ, ಅದಕ್ಕೆ ಸಂಪೂರ್ಣ ತಯಾರಿ ನಡೆಸುತ್ತೀನಿ. ಯಾರನ್ನೂ ಮೀಟ್‌ ಮಾಡುವುದಕ್ಕೆ ಬಯಸುವುದಿಲ್ಲ. ಸಂಪೂರ್ಣ ಏಕಾಂತವಾಗಿರುವುದಕ್ಕೆ ಬಯಸುತ್ತೇನೆ. ಇನ್ನು ಶೂಟಿಂಗ್‌ನಲ್ಲೂ ಅಷ್ಟೇ. ನನ್ನನ್ನು ಯಾರೂ ಡಿಸ್ಟರ್ಬ್ ಮಾಡುವುದಿಲ್ಲ. ನನ್ನ ಕುಟುಂಬದವರು ಸಹ ಸೆಟ್‌ಗೆ ಬರುವುದಿಲ್ಲ. ಇನ್ನು ಚಿತ್ರೀಕರಣದಲ್ಲಿರುವಾಗ ಫೋನ್‌ ಸಹ ಮುಟ್ಟುವುದಿಲ್ಲ. ಒಟ್ಟಾರೆ ಯಾವುದೇ ಅಡೆತಡೆಗಳಿರಬಾರದು ಮತ್ತು ಸಂಪೂರ್ಣ ಪಾತ್ರದಲ್ಲೇ ಮುಳುಗಿರಬೇಕೆಂದು ಬಯಸುವವನು ನಾನು. ಅದರಂತೆಯೇ ಇರುತ್ತೀನಿ.

* ರಂಗಭೂಮಿಯಿಂದ ಬಂದವರು ನೀವು. ಆಗಾಗ ಅಲ್ಲಿಗೆ ಹೋಗುತ್ತಿರುತ್ತೀರಾ?
ರಂಗಭೂಮಿಗೆ ವಾಪಸ್ಸು ಹೋಗಬೇಕು ಅಂತ ಆಸೆಯೇನೋ ಇದೆ. ಆದರೆ, ಅಲ್ಲಿನ ಬೇಡಿಕೆಗಳನ್ನ ಪೂರೈಸೋದು ಕಷ್ಟ. ಸತತ ಎರಡು ತಿಂಗಳುಗಳ  ದಿನದ 24 ಗಂಟೆಗಳು ತೊಡಗಿಸಿಕೊಂಡರೂ ಸಾಕಾಗುವುದಿಲ್ಲ. ಹಾಗಾಗಿ ಅಲ್ಲಿ ಹೋದರೆ, ಚಿತ್ರಗಳಲ್ಲಿ ನಟಿಸುವುದಕ್ಕೆ ಕಷ್ಟವಾಗುತ್ತದೆ. 

ಶಿಕ್ಷಣ ಮತ್ತು ಸಂಸ್ಕಾರ ಮುಖ್ಯ
ಭಾರತದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರಗಳಗಳ ಕುರಿತು ಮಾತನಾಡುವ ಮನೋಜ್‌, “ಆಗಲೂ ಇವೆಲ್ಲಾ ಇತ್ತು. ಈಗಲೂ ಮುಂದುವರೆದಿದೆ. ಆದರೆ, ಆಗ ಮಾಧ್ಯಮದ ಇಷ್ಟು ಗಟ್ಟಿಯಾಗಿರಲಿಲ್ಲ. ಈಗ ಮೀಡಿಯಾ ಅಷ್ಟೇ ಅಲ್ಲ, ಸೋಷಿಯಲ್‌ ಮೀಡಿಯಾ ಬಹಳ ಸಕ್ರಿಯವಾಗಿರುವುದರಿಂದ ಹೆಚ್ಚು ಸುದ್ದಿಯಾಗುತ್ತಿದೆ. ಆ ತರಹದ ಕೆಲಸಗಳನ್ನು ನಾವಾಗಲೀ, ನೀವಾಗಲಿ ಯಾಕೆ ಮಾಡುವುದಿಲ್ಲ ಹೇಳಿ? ಅದಕ್ಕೆ ಕಾರಣ ಶಿಕ್ಷಣ ಮತ್ತು ಸಂಸ್ಕಾರ.

ಪ್ರಮುಖವಾಗಿ ತಂದೆ-ತಾಯಿ ಮತ್ತು ಗುರುಹಿರಿಯರು ಚಿಕ್ಕಂದಿನಲ್ಲೇ ಮಕ್ಕಳಿಗೆ ಅದರಲ್ಲೂ ಗಂಡು ಮಕ್ಕಳಿಗೆ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದುನ್ನು ಹೇಳಿಕೊಡಬೇಕು. ಬರೀ ಇಷ್ಟೇ ಅಲ್ಲ, ತಪ್ಪು ಎಸಗಿದವರಿಗೆ ಉಗ್ರವಾದ ಶಿಕ್ಷೆಗಳನ್ನು ರೂಪಿಸಬೇಕು. ಈ ತರಹದ ತಪ್ಪುಗಳನ್ನು ಮಾಡಬಾರದು ಎಂಬ ಸಂದೇಶ ಸಾರುವಂತೆ ಶಿಕ್ಷೆಗಳನ್ನು ರೂಪಿಸಬೇಕು. ಆ ಬಗ್ಗೆ ಯೋಚಿಸಿರೂ ನಡುಕ ಹುಟ್ಟಬೇಕು. ಹಾಗಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಬಹುದು’ ಎನ್ನುತ್ತಾರೆ ಮನೋಜ್‌ ಬಾಜಪೇಯಿ.

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next