ಹುಕ್ಕೇರಿ: ಹೆಣ್ಣು ಗಂಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕುಟುಂಬದ ಸದಸ್ಯರ ಭೇದಭಾವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣವಾಗಿದೆ ಎಂದು ಹೆಣ್ಣು ಭ್ರೂಣ ಹತ್ಯೆ ನಿಷೇಧ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಡಾ| ಸಂಜಯ ಹೊಸಮಠ ಹೇಳಿದರು. ಪಟ್ಟಣದಲ್ಲಿ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ಗರ್ಭಪೂರ್ವ ಹಾಗೂ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಹಾಗೂ ಹೆಣ್ಣುಭ್ರೂಣ ಹತ್ಯೆ ಕಾಯ್ದೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಭ್ರೂಣ ಹತ್ಯೆ ಕಾನೂನಿಗೆ ವಿರುದ್ಧವಾಗಿದ್ದು, ಭ್ರೂಣ ಹತ್ಯೆ ಮಾಡುವ, ಹಾಗೂ ಪ್ರಚೋದಿಸುವವರ ಕುಟುಂಬದ ಸದಸ್ಯರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಭ್ರೂಣ ಹತ್ಯೆಯಿಂದ ಹೆಣ್ಣಿನ ಸಂಖ್ಯೆ ಇಳಿಮುಖವಾಗುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಾ ವೈದ್ಯಾಧಿಕಾರಿ ಡಾ| ಉದಯ ಕುಡಚಿ ಮಾತನಾಡಿ, ರಾಜಸ್ಥಾನ ಹರಿಯಾಣಗಳಲ್ಲಿ ಹಿಂದೆ ಭ್ರೂಣ ಹತ್ಯೆಮಾಡಿದ್ದರಿಂದ ಅಲ್ಲಿ ಲಿಂಗಾನುಪಾತದಲ್ಲಿ ಅಸಮಾನತೆ ಉಂಟಾಗಿದೆ ಎಂದರು. ತಾಲೂಕಿನ ಕೆಲ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಭ್ರೂಣ ಹತ್ಯೆ ಮಾಡಿಸಿಕೊಳ್ಳುವವರಿಗೆ ಸಹಕಾರ ನೀಡುತ್ತಿರುವುದು ತಿಳಿದು ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅಂಥವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಲಾಗುವುದೆಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ ಮಾತನಾಡಿ, ಹೆಣ್ಣು ಮಕ್ಕಳಿಗಾಗಿ ಸರಕಾರ ಅನೇಕ ಸವಲತ್ತುಗಳನ್ನು ಕೊಡುತ್ತಿದೆ.ಅವುಗಳನ್ನು ಪಡೆದುಕೊಳ್ಳುವುದರ ಜತೆಗೆ ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಲ್ಲಿ ಈ ಸಮಸ್ಯೆ ದೂರವಾಗುತ್ತದೆ ಎಂದರು.
ನ್ಯಾಯವಾದಿ ಭೀಮಸೇನ ಬಾಗಿ ಉಪನ್ಯಾಸ ನೀಡಿದರು. ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾಗೃತಿ ಜಾಥಾಕ್ಕೆ ಸಿವಿಲ್ ನ್ಯಾಯಾಧಿಧೀಶರಾದ ಭಾಗ್ಯಮ್ಮ ಚಾಲನೆ ನೀಡಿದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆ ಜಾಥಾದಲ್ಲಿ ಪಾಲ್ಗೊಂಡರು. ಬಿಜೆಪಿ ಬ್ಲಾಕ್ ಅಧ್ಯಕ್ಷ ಪರಗೌಡ ಪಾಟೀಲ, ತಹಶೀಲ್ದಾರ ಎನ್.ಬಿ ಪಾಟೀಲ, ,ಬಿಇಒ ಉಮಾದೇವಿ ಬಸ್ಸಾಪೂರೆ, ಕುಟುಂಬ ಕಲ್ಯಾಣ ಜಿಲ್ಲಾ ಅ ಧಿಕಾರಿ ಸಾವಿತ್ರಿ ಬೆಂಡಿಗೇರಿ, ಮಹಾದೇವಿ ಜಕಮತಿ, ಶೈಲಜಾ ಪಾಟೀಲ, ಜಿ.ಎ.ಕರಗುಪ್ಪಿ, ಸಿ.ಜಿ.ಅಗ್ನಿಹೋತ್ರಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.