ಬೆಂಗಳೂರು: ಉಡುಪಿ ಪವರ್ ಕಾಪೋರೇಷನ್ ಲಿಮಿಟೆಡ್ (ಯುಪಿಸಿಎಲ್) ಯೋಜನೆಗೆ 365.50 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್ ಅವರು ಪ್ರಶ್ನೆಗೆ ಸಚಿವರು ಲಿಖೀತ ಉತ್ತರ ನೀಡಿದ್ದಾರೆ. ಯುಪಿಸಿಎಲ್ ರವರ 2,800 ಮೆ.ವ್ಯಾ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಕಾಪು ತಾಲೂಕು ಸಾಂತೂರು ಗ್ರಾಮದ 294.45 ಎಕರೆ ಮತ್ತು ಎಲ್ಲೂರು ಗ್ರಾಮದ 281.90 ಎಕರೆ ಸೇರಿ ಒಟ್ಟು 576.45 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು 1995 ಮತ್ತು 98ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು.
ಅಂತಿಮ ಅಧಿಸೂಚನೆ ಸರ್ಕಾರದ ಅನುಮೋದನೆಗೆ ಸಲ್ಲಿಸುವ ಪೂರ್ವದಲ್ಲಿ ಪ್ರಸ್ತಾವಿತ ಭೂಸ್ವಾಧೀನ ವೆಚ್ಚದ ತಾತ್ಕಾಲಿಕ ಭೂಮೌಲ್ಯ ಮತ್ತು ಮಂಡಳಿಯ ಸೇವಾ ಶುಲ್ಕ ಸೇರಿ ಒಟ್ಟಿ 341.59 ಕೋಟಿ ರೂ ಮೊತ್ತ ಕೆಐಎಡಿಬಿಗೆ ಠೇವಣಿ ಇಡುವಂತೆ ಯುಪಿಸಿಎಲ್‌ಗೆ 2016ರಿಂದ 2022ರವರೆಗೆ ನಾಲ್ಕು ಬಾರಿ ಪತ್ರ ಬರೆದರೂ ಹಣ ಠೇವಣಿ ಮಾಡಿಲ್ಲ.
ಕೆಐಎಡಿಬಿ ಅಧಿಕಾರಿಗಳು 2022ರ ಡಿ.20ರಂದು ಸ್ಥಳ ಪರಿಶೀಲನೆ ನಡೆಸಿ ಈ ಹಿಂದೆ ಸ್ವಾಧೀನಪಡಿಸಿಕೊಂಡ 576.45 ಎಕರೆ ಜೊತೆಗೆ ಹೊಸದಾಗಿ 365 ಎಕರೆ ಒಟ್ಟು 941.95 ಎಕರೆ ಜಮೀನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ. ಅದರಂತೆ, ಹೆಚ್ಚುವರಿಯಾಗಿ 365.50 ಎಕರೆ ಜಮೀನುನ್ನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಲÛ 2023ರ ಜ.12ರಂದು ನಡೆದ ಮಂಡಳಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.