Advertisement
ರಾಜ್ಯದ 223 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮೇ 12 ರಂದು ಚುನಾವಣೆ ನಡೆಯಲಿದೆ. ಮತದಾರರ ಪಟ್ಟಿ ಪ್ರಕಾರ ರಾಜ್ಯ ಚುನಾವಣೆಗಾಗಿ 18ರಿಂದ 29 ವರ್ಷ ವಯಸ್ಸಿನ 8,24,000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ಕಳೆದ 5 ವರ್ಷ ಗಳಲ್ಲಿ ಮತದಾರರ ಅನುಪಾತವು ಏಕರೀತಿ ಇದ್ದರೂ “ಯುವ ಮತದಾರರ’ ಅನುಪಾತವು 2.2 ಪ್ರತಿಶತಕ್ಕೆ ಏರಿಕೆಯಾಗಿದೆ.
Related Articles
Advertisement
ಈ ಅಂಕಿ ಅಂಶಗಳು ಮತದಾನದ ಪ್ರಮಾಣ ಮತ್ತು ಅದರ ಫಲಿತಾಂಶಗಳ ಸಂಬಂಧಗಳನ್ನು ಎತ್ತಿ ತೋರಿಸುತ್ತವೆ. ನಾವು, ಪ್ರಜೆಗಳೇ ಪ್ರಭುಗಳಾಗಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ವರು ಎಂದು ಹೇಳಿಕೊಳ್ಳುವಾಗ ಮೇಲಿನ ಅಂಕಿ ಅಂಶಗಳು ತರ್ಕಕ್ಕೆ ಈಡುಮಾಡುತ್ತವೆ. ಅರ್ಧಕ್ಕಿಂತ ತುಸು ಹೆಚ್ಚು ಜನ ಮಾತ್ರ ಮತದಾನ ಮಾಡಿ ಗೆಲ್ಲಿಸಿದ ರಾಜಕಾರಣಿಯೊಬ್ಬ ಹೇಗೆ ಎಲ್ಲರ ಪ್ರತಿನಿಧಿಯಾಗುತ್ತಾನೆ? ಉಳಿದ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಇರುವ ಜನರಿಗೆ ಇದನ್ನು ಅರ್ಥಮಾಡಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಿ ಪರಿಹಾರ ಕಂಡುಹಿಡಿಯುವುದಕ್ಕೆ ಇದು ಸಕಾಲ.
ಇದೇ ಮೇ 12 ರಂದು ಮತದಾರನ ಜವಾಬ್ದಾರಿಯ ಪರೀಕ್ಷೆ ಎದುರಾಗಲಿದೆ. ವರ್ಷಗಟ್ಟಲೇ ದುಂಬಾಲುಬಿದ್ದು, ಹೆಣಗಾಡಿ ಟಿಕೆಟ್‌ಗಿಟ್ಟಿಸಿದ ಅಭ್ಯರ್ಥಿಗೂ ಇದು ಅಗ್ನಿ ಪರೀಕ್ಷೆ. ಅದೇಕೋ ಮತದಾರರು ನಿರ್ಣಾಯಕ ಹಂತ (ಪೀಕ್ ಪಿರಿಯಡ್)ದಲ್ಲಿ ಎಡವಿಬಿಡುತ್ತಾರೆ. ಇದರಿಂದಾಗಿ ರಾಜಕೀಯ ಪಕ್ಷಗಳ ಮತ್ತದೇ ರಾದ್ಧಾಂತಗಳು, ಮತ್ತದೇ ಗೋಳು, ಅಸಹನೆ, ರೇಜಿಗೆ ಪುನರಾ ವರ್ತನೆಯಾಗುತ್ತದೆ. ಕೆಲ ಸುಶಿಕ್ಷಿತ ವರ್ಗದ ಜನರಂತೂ ಇದೊಂದು ರಗಳೆ, ಮತ್ತಿದರ ಗೊಡವೆಯೇ ಬೇಡವೆಂಬಂತೆ ಮತದಾನವನ್ನು ತಿರಸ್ಕರಿಸುತ್ತಾರೆ. ಅರೇ, ನೀವು, ನಾವು ತಿರಸ್ಕರಿ ಸಿದ ಮಾತ್ರಕ್ಕೆ ಆಯ್ಕೆಗೊಂಡ ಅಭ್ಯರ್ಥಿ ನಮ್ಮನ್ನು ಪ್ರತಿನಿಧಿಸದೇ ಇರುತ್ತಾನೆಯೇ? ಅಥವಾ ಮತದಾನವನ್ನು ತಿರಸ್ಕರಿಸಿದವರಿ ಗಾಗಿಯೇ ಒಬ್ಬ ನಾಯಕನೇನಾದರೂ ಹುಟ್ಟುತ್ತಾನೆಯೇ? ಇಲ್ಲ ವಲ್ಲ? ಈ ಹಕ್ಕನ್ನು ತಿರಸ್ಕರಿಸುವುದರಿಂದ ನಮ್ಮ ಪ್ರಜಾಪ್ರಭುತ್ವವನ್ನು ನಾವೇ ವಿರೋಧಿಸಿದಂತೆ ಅಲ್ಲವೇ?
ನಮ್ಮಲ್ಲಿ ಕೆಲವರು ಈ ಹಕ್ಕನ್ನು ಮಾರಿಕೊಳ್ಳುವುದಕ್ಕೂ ರೆಡಿ ಯಾಗುತ್ತಾರೆ. ಏಕೆಂದರೆ ಇವರಲ್ಲಿ ಯಾರಿಗೆ ಮತ ಹಾಕಬೇಕು ಎನ್ನುವುದರ ವಿವೇಚನಾ ಶಕ್ತಿ ಇಲ್ಲದೇ ಇರುವುದು ಮತ್ತು ಅವರನ್ನು ಆರಿಸಿ ತಂದರೆ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ದೂರದೃಷ್ಟಿ ಇಲ್ಲದಿರುವುದು. ಆ ಕ್ಷಣದಲ್ಲಿ ಅಭ್ಯರ್ಥಿ ನೀಡುವ ಹಣ ಅಥವಾ ಇನ್ನಾವುದೋ ಆಮಿಷಕ್ಕೆ ಬಲಿಯಾಗಿ ಇವರು ಅಮೂಲ್ಯ ಮತವನ್ನೇ ಮಾರಿಕೊಂಡುಬಿಡುತ್ತಾರೆ. ಈ ತಪ್ಪು ಮುಂದೆ 5 ವರ್ಷಗಳವರೆಗೂ ಕಾಡುತ್ತದೆ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ.
ನಮ್ಮನ್ನು ಆಳುವ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಚರ್ಚೆಗಳಾಗಬೇಕು. ಈ ಮೊದಲು ಕ್ಷೇತ್ರದಲ್ಲಿ ಆತ ಮಾಡಿದ ಕೆಲಸಗಳೇನು ಎನ್ನುವುದನ್ನು ಪಟ್ಟಿ ಮಾಡಬೇಕು. ಯಾವ ಯೋಜನೆಗಳನ್ನು ಅವರು ಕ್ಷೇತ್ರಕ್ಕೆ ತಂದಿದ್ದಾರೆ? ಎಷ್ಟು ಅನುದಾನ ವನ್ನು ರಾಜ್ಯ-ಕೇಂದ್ರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ? ಅದರ ಸದ್ವಿನಿಯೋಗ ಎಷ್ಟರ ಮಟ್ಟಿಗೆ ಆಗಿದೆ? ಅಭಿವೃದ್ಧಿ ಕೆಲಸಗಳೇನಾಗಿವೆ? ವೈಯಕ್ತಿಕವಾಗಿ ಮತ್ತು ಸಾಮಾ ಜಿಕವಾಗಿ ಅಭ್ಯರ್ಥಿಯ ನಡವಳಿಕೆ ಹೇಗಿದೆ? ಆರೋಗ್ಯ, ವೈಯಕ್ತಿಕ ಬದುಕು ಅವರಿಗೆ ಕೆಲಸ ಮಾಡಲು ಪೂರಕವಾಗಿವೆಯೇ? ಸುಶಿಕ್ಷಿತರಾ? ತಕ್ಕ ಮಟ್ಟಿಗಾದರೂ ವಿದ್ಯಾಭ್ಯಾಸವಾಗಿ ದೆಯೇ? ಪಕ್ಷದಲ್ಲಿ ನಿಷ್ಠಾವಂತರಾಗಿದ್ದಾರೋ ಅಥವಾ ಪಕ್ಷಾಂತರವನ್ನೇ ಅಭ್ಯಾಸ ಮಾಡಿಕೊಂಡಿದ್ದಾರೋ? ಒಟ್ಟಾರೆ ಅಭ್ಯರ್ಥಿಯ ಬದ್ಧತೆಯ ಬಗ್ಗೆ ಮುಕ್ತವಾಗಿ ವಿಶ್ಲೇಷಣೆ-ಚರ್ಚೆಗಳಾಗಬೇಕು. ಯೋಗ್ಯ ವ್ಯಕ್ತಿಯೊಬ್ಬರು ಟಿಕೆಟ್ ವಂಚಿತರಾಗಿ ಹತಾಶರಾಗಿದ್ದಲ್ಲಿ ಕಣದಿಂದ ಹಿಂದೆ ಸರಿಯದೇ ಪಕ್ಷೇತರರಾಗಿಯಾದರೂ ಸ್ಪರ್ಧಿ ಸುವಂತೆ ಬೆಂಬಲಿಸಬೇಕು. ಹಾಲಿ ಇರುವ ಅಭ್ಯರ್ಥಿಯ ಕಾರ್ಯದಕ್ಷತೆಯನ್ನು ಅಳೆದು ತೂಗಬೇಕು. ಆಯಾ ಕ್ಷೇತ್ರಗಳಲ್ಲಿ ಸುಶಿಕ್ಷಿತರಾದವರು, ಶ್ರೀಸಾಮಾನ್ಯರಿಗೆ ಇದರ ಅರಿವನ್ನುಂಟು ಮಾಡಿಕೊಡಬೇಕು. ಒಂದು ಬಾರಿ ಈ ಬಗ್ಗೆ ಶ್ರೀಸಾಮಾನ್ಯ ಜಾಗೃತ ಗೊಂಡರೆ ಆತ ಯಾವುದೇ ಆಮಿಷಕ್ಕೂ ಅಷ್ಟು ಸುಲಭವಾಗಿ ಬೀಳಲಾರ. ವಿವಿಧ ಸಂಘ ಸಂಸ್ಥೆಗಳು ಮುಕ್ತ ಚರ್ಚೆಗಳನ್ನು ಏರ್ಪಡಿಸಿ ಸಾಧ್ಯವಾದಷ್ಟು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದ್ದು ಮಹಿಳಾ ಸಂಘಟನೆಗಳು ಇದಕ್ಕೆ ಪಣತೊಡಬೇಕಿದೆ. ಪದವಿ ಕಾಲೇಜುಗಳಲ್ಲಿ ಉಪನ್ಯಾಸಕ ವರ್ಗವು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿ. ಯಾವೊಬ್ಬ ವಿದ್ಯಾರ್ಥಿಯೂ ಮತ ದಾನ ಮಾಡದೇ ಉಳಿಯದಂತೆ ಮಾಡಬೇಕಿದೆ. ಕುಟುಂಬದ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಿದೆ. ಹೊಸ ಮತದಾರರು ಇನ್ನೊಬ್ಬರನ್ನು ಅನುಸರಿಸದೇ ಸ್ವಂತ ಮತ್ತು ಸಮಚಿತ್ತದ ನಿರ್ಣಯ ತೆಗೆದುಕೊಳ್ಳಬೇಕು. ಈಗಾಗಲೇ ಚುನಾವಣೆ ಆಯೋಗವು ದಕ್ಷ ಅಧಿಕಾರಿ ವರ್ಗ ವನ್ನು ಚುನಾವಣೆಗೆ ನೇಮಿಸಿದೆ. ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಕೊಡಲು ಪ್ರಾರಂಭಿಸಿದ್ದು, ನಕಲಿ ಮತದಾನ ಮತ್ತು ತಿರಸ್ಕೃತ ಮತದಾನದ ಪ್ರಮಾಣವು ಆದಷ್ಟು ಕಡಿಮೆ ಆಗಲೆಂದು ಪಣತೊಟ್ಟಿದೆ. ಕನಿಷ್ಟ ಪಕ್ಷ ನಮ್ಮ ಮತದಾನದ ಪ್ರಮಾಣ 90 ಪ್ರತಿಶತ ದಾಟಿದರೆ ಸುಭದ್ರ ಸರ್ಕಾರ ನೆಲೆಯೂರುವಲ್ಲಿ ಸಂದೇಹವಿಲ್ಲ. ಚುನಾವಣಾ ದಿನದಂದು ನಮ್ಮೆಲ್ಲ ವೈಯಕ್ತಿಕ ಕಮಿಟ್‌ಮೆಂಟ್‌ಗಳನ್ನು ಬದಿಗೊತ್ತಿ ಅಸಡ್ಡೆ ಮಾಡದೇ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯೋಣ. ಏಕೆಂದರೆ ಮುಂದಿನ 5 ವರ್ಷಗಳಿಗಾಗಿ ನಾವು ಕಣದಲ್ಲಿರುವ ಅಭ್ಯರ್ಥಿಗಳ ಜೊತೆಗೆ ಕಮಿಟ್ ಆಗಬೇಕಿದೆಯಲ್ಲ! ಡಾ. ಅಶೋಕ ಪಾಟೀಲ