Advertisement
ಮರುಕ್ಷಣವೇ ಆ ತಾಯಿಯೂ ಎರಡು ಮಕ್ಕಳೂ ಕಿಟಾರನೆ ಚೀರಿಕೊಂಡರು. ಈ ಆಕ್ರಂದನ ಕೇಳಿ ನೆರೆಹೊರೆಯವರು ಓಡಿಬಂದು ನೋಡಿದಾಗಲೇ ಗೊತ್ತಾಯಿತು; ಕ್ಯಾನ್‌ನಲ್ಲಿ ಇದ್ದುದ್ದು ಆಸಿಡ್! ಹೆಂಡತಿ-ಮಕ್ಕಳನ್ನು ಸಾಯಿಸಬೇಕು ಎಂಬ ಉದ್ದೇಶದಿಂದಲೇ ಅಶ್ರಫ್, ಆಸಿಡ್ ತಂದಿದ್ದ!
Related Articles
Advertisement
ಐದು ವರ್ಷ ತುಂಬುತ್ತಿದ್ದಂತೆಯೇ, ಆಸ್ಪತ್ರೆಯ ಸಿಬ್ಬಂದಿಯೇ ಮುತುವರ್ಜಿ ವಹಿಸಿ ಮಾನವ ಸೇವಾ ಸಂಘ ಎಂಬ ಅನಾಥಾಶ್ರಮಕ್ಕೆ ಸೇರಿಸಿದರು. ಆಸ್ಪತ್ರೆಯಲ್ಲಿ, ನನ್ನಂಥದೇ ಮುಖಭಾವದ ಐದಾರು ಮಂದಿ ಇದ್ದರು. ಹಾಗಾಗಿ, ನಾನು ಉಳಿದವರಿಗಿಂತ ಭಿನ್ನವಾಗಿದೀನಿ ಎಂಬ ಭಾವನೆಯೇ ನನಗಿರಲಿಲ್ಲ. ಆದರೆ, ಅನಾಥಾಶ್ರಮದಲ್ಲಿ, ನನ್ನದೇ ವಯಸ್ಸಿನ ಮಕ್ಕಳು, ನನ್ನೊಂದಿಗೆ ಬೆರೆಯಲು ಹಿಂದೇಟು ಹಾಕತೊಡ ಗಿದರು. ಕೆಲವರಂತೂ ನನ್ನನ್ನು ಕಂಡರೆ ಸಾಕು: ಬೆಚ್ಚಿ ಬೀಳುತ್ತಿದ್ದರು.
ಶಾಲೆಯಲ್ಲೂ ಅಷ್ಟೇ; ನನಗೆ ಯಾರೂ ಫ್ರೆಂಡ್ಸ್ ಇರಲಿಲ್ಲ. ಡೆಸ್ಕ್ನಲ್ಲಿ ನನ್ನ ಪಕ್ಕ ಕೂರುವುದಕ್ಕೂ ಯಾರೂ ಒಪ್ಪುತ್ತಿರಲಿಲ್ಲ. ಕೆಲವರಂತೂ ನೇರವಾಗಿ – “ನಿನ್ನನ್ನು ನೋಡಿದರೆ ಭಯವಾಗುತ್ತೆ. ಕೆಲವೊಮ್ಮೆ ನಿನ್ನ ಚರ್ಮದ ವಾಸನೆಯ ಕಾರಣಕ್ಕೆ ವಾಂತಿ ಬರುತ್ತೆ. ನಮ್ಮನ್ನು ಮಾತನಾಡಿಸಬೇಡ. ನಮ್ಮ ಹತ್ರ ಕೂತ್ಕೊàಬೇಡ ಪ್ಲೀಸ್’ ಎಂದು ನೇರವಾಗಿಯೇ ಹೇಳಿಬಿಡುತ್ತಿದ್ದರು. ಪರಿಣಾಮ -ಉಳಿದವರೆಲ್ಲ ಗುಂಪಾಗಿ ಕಲೆತು ಆಡುವಾಗ, ನಾನು ಮರದಡಿಯಲ್ಲಿ ನಿಂತು ಕಣ್ಣೀರು ಸುರಿಸುತ್ತಿದ್ದೆ. ಉಳಿದವರೆಲ್ಲ ಹಂಚಿಕೊಂಡು ತಿನ್ನುವಾಗ, ನಾನು ಏಕಾಂಗಿಯಾಗಿ ಲಂಚ್ ಬಾಕ್ಸ್ ಖಾಲಿ ಮಾಡುತ್ತಿದ್ದೆ. ಅಂಥ ಸಂದರ್ಭದಲ್ಲೆಲ್ಲ- ಛೆ, ನನ್ನದೂ ಒಂದು ಬದುಕಾ, ಅನ್ನಿಸಿ ಸಂಕಟವಾಗುತ್ತಿತ್ತು.
ಹೆಚ್ಚಿನ ಮಕ್ಕಳನ್ನು ಶಾಲೆಗೆ ಬಿಡಲು/ಮನೆಗೆ ಕೆರೆದೊಯ್ಯಲು, ಅವರ ಅಪ್ಪ-ಅಮ್ಮ ಬರುತ್ತಿದ್ದರು. ಶಾಲೆ ಮುಗಿದಾಗ, ಹೊರಗೆ ನಿಂತಿರುತ್ತಿದ್ದ ಹೆತ್ತವರನ್ನು ಕಂಡಾಕ್ಷಣ, ಸಹಪಾಠಿಗಳೆಲ್ಲ ಓಡಿಹೋಗಿ ತಬ್ಬಿಕೊಳ್ಳುತ್ತಿದ್ದರು. ಅವರ ಕೈ ಹಿಡಿದು ಗರ್ವದಿಂದ ಹೆಜ್ಜೆ ಹಾಕುತ್ತಿದ್ದರು. ಅಂಥ ಸಂದರ್ಭದಲ್ಲೆಲ್ಲ, ಬಿಟ್ಟೂ ಬಿಡದೆ ಹೆತ್ತವರ ನೆನಪಾಗುತ್ತಿತ್ತು. ಕೈಹಿಡಿದು ನಡೆಸಬೇಕಿದ್ದ ತಂದೆಯೇ ಆಸಿಡ್ ಎರಚಿ ಕೊಲ್ಲಲು ಬಂದನಂತಲ್ಲ; ಎರಡು ತಿಂಗಳ ಮಗುವಿನ ಮೇಲೆ ದಾಳಿ ಮಾಡಬಾರದು ಎಂಬಂಥ ಕನಿಷ್ಠ ತಿಳಿವಳಿಕೆಯೂ ನನ್ನ ತಂದೆಗೆ ಇಲ್ಲವಾಯಿತೇ?-ಅನ್ನಿಸಿ ದುಃಖವಾಗುತ್ತಿತ್ತು. ಅಂಥ ಸಂದರ್ಭದಲ್ಲೆಲ್ಲ, ಸಮಾಧಾನ ಆಗುವಷ್ಟು ಹೊತ್ತು ಆಳುತ್ತಾ ಕೂತುಬಿಡುತ್ತಿದ್ದೆ.
ಭವಿಷ್ಯದಲ್ಲಿ ಡಾಕ್ಟರ್ ಆಗಬೇಕು. ಆನಂತರ ನನ್ನಂತೆಯೇ ಆಸಿಡ್ ದಾಳಿಗೆ ತುತ್ತಾದವರ, ಅಸಹಾಯಕರ ಸೇವೆ ಮಾಡಬೇಕು ಎಂಬ ಆಸೆಯಿತ್ತು. ಶ್ರದ್ಧೆಯಿಂದ ಓದತೊಡಗಿದೆ. ಆದರೆ, ಆಸಿಡ್ ಅಟ್ಯಾಕ್‌ನ ಕಾರಣದಿಂದ ಯಾವಾಗೆಂದರೆ ಆಗ ಪೇಷಂಟ್ ಆಗಿಬಿಡುತ್ತಿದ್ದೆ. ಬೋರ್ಡ್ ಎಕ್ಸಾಂ ಆರಂಭವಾಗಲು ಕೆಲವೇ ದಿನ ಇದ್ದಾಗಲೇ ಕಾಯಿಲೆ ಬಿದ್ದೆ. ಪರ್ಸೆಂಟೇಜ್ ಕಮ್ಮಿಯಿದ್ದ ಕಾರಣ, ಪಿಯುಸಿಯಲ್ಲಿಸೈನ್ಸ್ ತಗೊಳ್ಳಲು ಆಗಲಿಲ್ಲ. ಡಾಕ್ಟರ್ ಆಗದಿದ್ದರೆ ಏನಂತೆ? ಕಂಪ್ಯೂಟರ್ ಅಪ್ಲಿಕೇಶನ್ಸ್‌ನಲ್ಲಿ ಡಿಗ್ರಿ ಮಾಡಿ, ಬಿಲ್‌ಗೇಟ್ಸ್ ಥರಾ ಕಂಪನಿ ಕಟ್ಟಿದರಾಯ್ತು ಎಂಬ ಕನಸು ಕಂಡೆ. ಕಾಲೇಜು ಅಂದಮೇಲೆ ಕೇಳಬೇಕೆ? ಅದು ಕನಸುಗಳ ಮಾಯಾಲೋಕ. ಆಸೆ, ಕನಸು, ಮೋಜು-ಮಸ್ತಿ ಎಲ್ಲವೂ ಅಲ್ಲಿತ್ತು. ಆದರೆ, ಎಲ್ಲದರಿಂದಲೂ ನಾನು ದೂರವೇ ಇದ್ದೆ. ಯಾಕೆಂದರೆ, ಕಾಲೇಜಿನಲ್ಲಿ ನನಗೆ ಆಪ್ತರೇ ಇರಲಿಲ್ಲ. ಕಾಲೇಜು ಬಸ್‌ನಲ್ಲಿ ಕೂಡ, ನನ್ನ ಪಕ್ಕ ಕೂರಲು ಯಾರೂ ಬರುತ್ತಿರಲಿಲ್ಲ. ದುರಾದೃಷ್ಟವನ್ನೇ ಜೊತೆಗಿಟ್ಟುಕೊಂಡು ಹುಟ್ಟಿದವಳಲ್ಲವೆ? ನನ್ನು ಹಣೆಬರಹಕ್ಕೆ ಯಾರೇನು ಮಾಡಲಾದೀತು ಎಂದುಕೊಂಡು ಸುಮ್ಮನಾಗುತ್ತಿದ್ದೆ. ಕಡೆಗೊಮ್ಮೆ, ಡಿಸ್ಟಿಂಕ್ಷನ್‌ನಲ್ಲಿ ಪದವಿ ಮುಗಿಸಿದೆ. ಅಬ್ಟಾ! ಒಳ್ಳೆಯ ಮಾರ್ಕ್ಸ್ ಬಂದಿದೆ ಎಂದು ಕುಣಿದಾಡುವ ಮೊದಲೇ ಆಘಾತವೊಂದು ಜೊತೆಯಾಯಿತು. 18 ವರ್ಷ ತುಂಬಿದ ಮೇಲೆ ಅನಾಥಾಶ್ರಮದಲ್ಲಿ ಉಳಿಯುವಂತಿಲ್ಲ ಎಂಬ ನಿಯಮ, ಆಶ್ರಮದಿಂದಲೂ ನನ್ನನ್ನು ದೂರ ಮಾಡಿತು. ಈಗ ವಾಸಕ್ಕೆ ಮನೆಯನ್ನೂ, ಹೊಟ್ಟೆ ಪಾಡಿಗೆ ನೌಕರಿಯನ್ನೂ ಹುಡುಕಲೇಬೇಕಾಯಿತು. ಡಿಸ್ಟಿಂಕ್ಷನ್ ಅಂಕಗಳು ಜೊತೆಗಿರುವಾಗ ಚಿಂತೆಯೇಕೆ ಅಂದುಕೊಂಡೇ ಅರ್ಜಿ ಹಾಕಿದೆ. ಸಂದರ್ಶನಕ್ಕೆ ಹೋದರೆ, ನನ್ನ ಮುಖ ನೋಡಿದ ತಕ್ಷಣ- “ಸಾರಿ’ ಎಂದಷ್ಟೇ ಹೇಳಿ ವಾಪಸ್ ಕಳಿಸುತ್ತಿದ್ದರು. ಬಾಡಿಗೆ ಮನೆಯನ್ನು ಹುಡುಕಿಕೊಂಡು ಹೋದರೆ- “ಸಾರಿ ಕಣಮ್ಮಾ, ನಿನ್ನ ಮುಖ ನೋಡಿದ್ರೇ ಭಯವಾಗುತ್ತೆ. ನಿನಗೆ ಮನೆ ಕೊಟ್ರೆ ನೆರೆಹೊರೆಯ ಜನರ ವಿರೋಧ ಎದುರಿಸಬೇಕಾಗುತ್ತೆ’ ಅನ್ನುತ್ತಿದ್ದರು. ಮತ್ತೆ ಕೆಲವರು, ಭಾರೀ ಪ್ರೀತಿ ತೋರಿಸಿದಂತೆ ಮಾತಾಡಿ, ಯಾಕೆ ಹೀಗಾಯ್ತು? ಯಾರು ಆಸಿಡ್ ಹಾಕಿದ್ದು? ಎನ್ನುತ್ತಿದ್ದರು. ನಂತರ “ಏನೂ? ಸ್ವಂತ ತಂದೆಯೇ ಆಸಿಡ್ ಹಾಕಿಬಿಟ್ನಾ?’ ಎಂದು ಉದ್ಗರಿಸಿ, ಒಂದು ಕಣ್ಣು ಪೂರ್ತಿ ಕಾಣಲ್ವಾ? ಅಯ್ಯೋ ಪಾಪ ಎಂಬಂಥ ಮಾತುಗಳನ್ನಾಡಿ ಸಾಗಹಾಕುತ್ತಿದ್ದರು. ಮಧ್ಯಾಹ್ನದವರೆಗೆ ಕೆಲಸಕ್ಕಾಗಿ ಅಲೆಯುವುದು, ಆನಂತರ ಮನೆಗಳನ್ನು ಹುಡುಕುವುದು- ಹೀಗೇ ಸಾಗಿತ್ತು ಬದುಕು. ಆಶ್ರಯ ನೀಡಲು ಗೆಳತಿಯಾಗಲಿ, ಬಂಧುಗಳಾಗಲಿ ಇರಲಿಲ್ಲ. ಹಾಗಾಗಿ, ಪಿ.ಜಿ.ಗಳಲ್ಲಿ ಒಂದು ವಾರ, ಹತ್ತು ದಿನಗಳ ಲೆಕ್ಕದಲ್ಲಿ ಉಳಿಯತೊಡಗಿದೆ. ಹತ್ತಾರು ಕಡೆ ಅಲೆದ ಮೇಲೆ, ಒಂದು ಕಂಪನಿಯ ಎಚ್.ಆರ್. ವಿಭಾಗದಲ್ಲಿ ಕೆಲಸ ಸಿಕ್ಕಿತು. ಅಬ್ಟಾ, ಕಡೆಗೂ ಹೊಟ್ಟೆಪಾಡಿಗೆ ಒಂದು ದಾರಿಯಾಯಿತು ಎಂದುಕೊಂಡು, ನೆಮ್ಮದಿಯ ಉಸಿರುಬಿಟ್ಟೆ. ಹೊಸ ಕೆಲಸಕ್ಕೆ ಸೇರಿ ಮೂರು ತಿಂಗಳು ಕಳೆದಿತ್ತಷ್ಟೆ.. ಆಗಲೇ ಕಂಪನಿಯ ಮುಖ್ಯಸ್ಥರಿಂದ ಕರೆ ಬಂದಿತು. “ಈ ಕುರೂಪಿಯ ಜೊತೆಗೆ ಕೆಲಸ ಮಾಡಲು ನಮಗೆ ಸಾಧ್ಯವೇ ಇಲ್ಲ. ಆಕೆಯೊಂದಿಗೆ ಇರೋದಕ್ಕೆ ಭಯವಾಗುತ್ತೆ. ಆಕೆಯನ್ನು ಕೆಲಸದಿಂದ ತೆಗೆದುಬಿಡಿ’ ಎಂದು ನೌಕರರೆಲ್ಲ ಮನವಿ ಮಾಡಿದ್ದಾರಮ್ಮಾ… ಎಲ್ಲರ ಬೇಡಿಕೆಗೆ ಸ್ಪಂದಿಸುವುದು ನನ್ನ ಜವಾಬ್ದಾರಿ’ ಎನ್ನುತ್ತಲೇ ಅವರು ಮಾತು ಮುಗಿಸಿದರು. 2015ರಲ್ಲಿ, ಕಾಲೇಜಿನ ಸಹಪಾಠಿಗಳೆಲ್ಲ, ತಮ್ಮ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಿ ಸಂಭ್ರಮಿಸುತ್ತಿದ್ದರು. ಅದನ್ನು ನೋಡಿದಾಗೆಲ್ಲ, ನಾನೂ ಒಂದಷ್ಟು ಫೋಟೋ ಹಾಕಬೇಕು ಎಂಬ ಮನಸ್ಸಾಗುತ್ತಿತ್ತು. ನನ್ನ ಕುರೂಪವನ್ನು ನೋಡಿ ಎಲ್ಲರೂ ಆಡಿಕೊಂಡರೆ, ಟ್ರೋಲ್ ಮಾಡಿದರೆ ಗತಿಯೇನು ಅನ್ನಿಸಿ ಸುಮ್ಮನಾಗಿದ್ದೆ. ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿದೆನಲ್ಲ: ಆಗ, ಮನದ ಮಾತುಗಳನ್ನು ಯಾರೊಂದಿಗಾದರೂ ಹೇಳಿಕೊಳ್ಳಬೇಕು ಅನ್ನಿಸಿತು. ಆಗಿದ್ದಾಗಲಿ ಎಂದುಕೊಂಡೇ ಫೇಸ್‌ಬುಕ್‌ಗೆ ನನ್ನ ಫೋಟೋ ಹಾಕಿದೆ. ನನ್ನ ಸಂಕಟದ ಕಥೆ ಬರೆದುಕೊಂಡೆ. “ಬದುಕು ನನ್ನನ್ನು ಹೆಜ್ಜೆ ಹೆಜ್ಜೆಗೂ ಬೇಟೆಯಾಡಿದೆ. ವಾಸಿಯಾಗದಂಥ ಗಾಯಗಳನ್ನು ಮಾಡಿದೆ. ಆದರೂ ನಾನು ನಗುತ್ತಿದ್ದೇನೆ. ನಗುತ್ತಲೇ ಬಾಳುತ್ತೇನೆ. ನನಗೆ ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳಲು, ಮಾಡೆಲ್ ಆಗಲು ಇಷ್ಟ. ಕುರೂಪಿ ಎಂದ ಮಾತ್ರಕ್ಕೆ ಮಾಡೆಲಿಂಗ್ ಮಾಡಬಾರದು ಎಂದು ನಿಯಮ ಇಲ್ಲವಲ್ಲ…’ ಎಂದು ಬರೆದುಕೊಂಡಿದ್ದೆ… ಆನಂತರ ನಡೆಯಿತಲ್ಲ; ಅದು ನಿಜವಾದ ಪವಾಡ. ನನ್ನ ಬರಹಕ್ಕೆ ದೇಶದ ಮೂಲೆಮೂಲೆಯ ಜನ ಸ್ಪಂದಿಸಿದರು. “ತಂಗೀ, ಕಂದಾ, ಮಗೂ, ಮಗಳೇ’ ಎಂದೆಲ್ಲಾ ಕರೆದು ನನಗೆ ಸಮಾಧಾನ ಹೇಳಿದರು. ಸುಶ್ಮಿತಾ ಸೇನ್, ಜೂಹಿ ಚಾವ್ಲಾ ಥರದ ಖ್ಯಾತ ನಟಿಯರು ಫ್ಯಾಷನ್ ಶೋನಲ್ಲಿ ನನ್ನ ಕೈಹಿಡಿದು ನಡೆದರು. ಹಿರಿಯ ನಟಿ ಶಬಾನಾ ಅಜ್ಮಿ- ನೀನು ನಮ್ಮೆಲ್ಲರ ಮುದ್ದಿನ ಹುಡುಗಿಯಲ್ಲವಾ? ನೀನು ಅದ್ಹೇಗೆ ಒಂಟಿಯಾಗಲು ಸಾಧ್ಯ? ಎಂದು ಪ್ರಶ್ನಿಸಿ ಕೆನ್ನೆ ತಟ್ಟಿದರು. ಇಷ್ಟು ದಿನ, ಸಂಕಟಗಳಿಂದ ಅಳುತ್ತಿದ್ದೆ. ಈಗ, ಹೊಸದೊಂದು ದುನಿಯಾ ಕಂಡು ಆನಂದಭಾಷ್ಪ ಸುರಿಸುತ್ತಿದ್ದೇನೆ. ನನ್ನಂತೆಯೇ ಆಸಿಡ್ ದಾಳಿಗೆ ತುತ್ತಾದವರಿಗೆ ಆಶ್ರಯ ಕಲ್ಪಿಸಲು ಒಂದು ಎನ್‌ಜಿಒ ಆರಂಭಿಸಿದ್ದೇನೆ. ಇದೆಲ್ಲದರ ಮಧ್ಯೆ ಅಮ್ಮ ನೆನಪಾಗುತ್ತಾಳೆ. ಆಕೆಯೂ ನನ್ನಂಥದೇ (ಕು)ರೂಪ ಹೊಂದಿ ಬದುಕಿಬಿಟ್ಟಿದ್ದರೆ, ಈಗ ಆಕೆಯನ್ನೇ ಒಂದು ಮಗುವಿನಂತೆ ನೋಡಿಕೊಳ್ಳಬಹುದಿತ್ತು ಅನಿಸುತ್ತೆ…
-ಹೀಗೆ ಮುಗಿಯುತ್ತದೆ ಅನ್‌ಮೋಲ್‌ಳ ಮಾತು. ಗೆಲ್ಲ ಬೇಕು ಎಂದು ಹಂಬಲಿಸುವವರಿಗೆ, ಅನ್‌ಮೋಲ್‌ಳ ಯಶೋಗಾಥೆ ಒಂದು ಕೈಪಿಡಿಯಂತೆ ಇದೆಯಲ್ಲವೆ? ಎ.ಆರ್.ಮಣಿಕಾಂತ್