Advertisement

“ಮಗು ಎತ್ತಿ ಮುದ್ದಾಡುತ್ತಿದ್ದಾಗಲೇ ಆ್ಯಸಿಡ್‌ ಎರಚಿದ’

10:10 AM Feb 02, 2020 | mahesh |

ಮಂಗಳೂರು: ಎರಡು ವರ್ಷದ ಮಗುವನ್ನು ಎತ್ತಿಕೊಂಡು ಆಡಿಸುತ್ತಿದ್ದೆ. ಏಕಾಏಕಿ ಬಂದು ಕಿಟಿಕಿಯಿಂದ ಆ್ಯಸಿಡ್‌ ಎರಚಿದ… ನನ್ನ ಚೀರಾಟ ಬಿಡಿ, ಮಗುವಿನ ಅಳುವಿಗೂ ಕರಗಲಿಲ್ಲ ಆತ… ಬಾಗಿಲು ತೆಗೆಯಲೂ ಬಿಡಲಿಲ್ಲ…

Advertisement

ಕಡಬದ ಕೋಡಿಂಬಾಳದಲ್ಲಿ ಜ. 23ರಂದು ಮೈದುನನಿಂದಲೇ ಆ್ಯಸಿಡ್‌ ದಾಳಿಗೊಳಗಾದ ಮಹಿಳೆ ಸ್ವಪ್ನಾ ಹೇಳುತ್ತ ಗದ್ಗದಿತರಾದರು. ಇಂತಹ ಪೈಶಾಚಿಕ ಕೃತ್ಯ ಎಸಗಿದವನಿಗೆ ಶಿಕ್ಷೆಯಾಗಲೇಬೇಕು. ಸಮಾಜದಲ್ಲಿ ಹೆಣ್ಣುಮಕ್ಕಳು ಬದುಕಬೇಕು ಎಂದು ಕಣ್ಣೀರಾದರು ಆಕೆ.

ವರ್ಷದ ಹಿಂದೆ ಪತಿ ಅಗಲಿದ ಅನಂತರ ಮೂವರು ಹೆಣ್ಣುಮಕ್ಕಳೊಂದಿಗೆ ಕೋಡಿಂಬಾಳದಲ್ಲಿ ವಾಸವಾಗಿದ್ದ ಸ್ವಪ್ನಾರಿಗೆ ಸಣ್ಣ ತೋಟವೊಂದೇ ಜೀವನಾಧಾರ. ಅವರೇ ಹೇಳುವಂತೆ ಪತಿಯ ಸಹೋದರ ಜಯಾನಂದ ನಾಯ್ಕ ಆಗಾಗ ಕಿರುಕುಳ ನೀಡುತ್ತಿದ್ದ. ಜಾಗದ ವಿಷಯದಲ್ಲಿ ತಕರಾರು ಎತ್ತಿದ್ದನಲ್ಲದೆ, ಲೈಂಗಿಕವಾಗಿಯೂ ಪೀಡಿಸುತ್ತಿದ್ದ. ಸ್ವಪ್ನಾ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜ. 23ರಂದು ಏಕಾಏಕಿ ಸ್ವಪ್ನಾರ ಮನೆಗೆ ಬಂದಾತ ಮಾತಿನಲ್ಲಿ ಕೆಣಕಿದ. ಮಗುವನ್ನು ಹಿಡಿದುಕೊಂಡು ಮನೆಯೊಳಗಿಂದ ಹೊರಗೆ ನೋಡಿದ ಸ್ವಪ್ನಾರ ಬಳಿ ಬಂದು ಕೈಯಲ್ಲಿ ಹಿಡಿದಿದ್ದ ಆ್ಯಸಿಡನ್ನು ಕಿಟಕಿ ಮೂಲಕ ಎರಚಿದ. ಕ್ಷಣಾರ್ಧದಲ್ಲಿ ನನ್ನ ಮುಖ, ಗಂಟಲು, ಎದೆ, ಭುಜ ಸಂಪೂರ್ಣ ಕರಟಿತ್ತು. ಮಗುವಿನ ಮುಖಕ್ಕೂ ಅಲ್ಲಲ್ಲಿ ಆ್ಯಸಿಡ್‌ ತಾಗಿ ಗಾಯವಾಗಿತ್ತು ಎನ್ನುವಾಗ ಸ್ವಪ್ನಾರ ಕಣ್ಣಾಲಿ ತುಂಬಿತು.

ಭಾರೀ ಸುಟ್ಟ ಗಾಯ
ಸ್ವಪ್ನಾರ ಮುಖ ಸಂಪೂರ್ಣ ಸುಟ್ಟು ಕರಕಲಾಗಿದೆ. ಎಡಗಣ್ಣು ಕುರುಡಾಗಿದೆ. ಮೆಗಾ ಸ್ಲೀವ್‌ ಚೂಡಿದಾರ ಧರಿಸಿದ್ದರಿಂದ ಭುಜದಿಂದ ಸ್ವಲ್ಪ ಕೆಳಭಾಗದವರೆಗೆ ಕರಟಿದೆ. ಎದೆಯ ಭಾಗದ ವರೆಗೆ ಆ್ಯಸಿಡ್‌ ತಾಗಿ ಸುಟ್ಟ ಗಾಯಗಳಾಗಿವೆ. ಕೇವಲ ಜ್ಯೂಸ್‌, ನೀರು ಸೇವಿಸಿ ದಿನದೂಡುತ್ತಿದ್ದಾರೆ. ಮಾತನಾಡಲೂ ಆಗುತ್ತಿಲ್ಲ. ನೋವಿನ ನಡುವೆಯೂ ಅವರ ಕಾಳಜಿ ಮಕ್ಕಳೆಡೆಗೇ ಇತ್ತು.

ಉರಿಯೊಂದಿಗೆ 2 ಕಿ.ಮೀ. ನಡೆದೆ!
ಮನೆಯ ಹತ್ತಿರ ವಾಹನ ಸೌಲಭ್ಯ ಇಲ್ಲ. ಆ್ಯಸಿಡ್‌ ಎರಚಿದ ಬಳಿಕವೂ ಆರೋಪಿ ನಾನು ಹೊರಬಾರದಂತೆ ನಿಂತಿದ್ದ. ಉರಿ, ಮಗುವಿನ ಚೀರಾಟದ ನಡುವೆ ಕಡಬ ಪೊಲೀಸ್‌ ಠಾಣೆಗೆ ಕರೆ ಮಾಡಿದರೆ, ಬಂದು ದೂರು ನೀಡಿ ಎಂದರು. ಆತ ಹೋದ ತತ್‌ಕ್ಷಣ ಮಗುವನ್ನೆತ್ತಿಕೊಂಡು 2 ಕಿ.ಮೀ. ನಡೆದು ಕೋಡಿಂಬಾಳ ಸರಕಾರಿ ಆಸ್ಪತ್ರೆ ಸೇರಿದೆ. ಅಲ್ಲಿಂದ ಪುತ್ತೂರಿಗೆ ಬಳಿಕ ಮಂಗಳೂರಿಗೆ ಕಳುಹಿಸಿ ಕೊಟ್ಟರು ಎಂದರು ಸ್ವಪ್ನಾ.

Advertisement

ಸಾಕ್ಷಿ ಬೇಕಂತೆ!
ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಬಳಿಕ ಸಾಕ್ಷಿ ಬೇಕು ಎಂದರು. ಸಾಕ್ಷಿಯನ್ನು ಎಲ್ಲಿಂದ ಕೊಡಲಿ? ಸಾಕ್ಷಿ ಹುಡುಕುತ್ತಾ ಕುಳಿತುಕೊಳ್ಳಬೇಕೇ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೇ ಎನ್ನುತ್ತಾ ಗದ್ಗದಿತರಾದರು.

ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ
ಸ್ವಪ್ನಾರ ಮೂವರು ಮಕ್ಕಳ ಪೈಕಿ ದೊಡ್ಡವಳು 6 ಮತ್ತು ಎರಡನೆಯವಳು 3 ವರ್ಷದವರು. ಇಬ್ಬರೂ ಕಡಬದಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಪ್ರಸ್ತುತ ಅಲ್ಲಿ ಮನೆ ಬಾಗಿಲು ಹಾಕಿರುವುದರಿಂದ ಮಕ್ಕಳು ಶಾಲೆಗೆ ಹೋಗಲಾಗದೆ, ಕಾಸರಗೋಡಿನ ತಾಯಿ ಮನೆಯಲ್ಲಿದ್ದಾರೆ. ತಾಯಿ ಮನೆಯಲ್ಲಿ ತಂದೆ, ತಾಯಿ, ಇಬ್ಬರು ಅಣ್ಣಂದಿರಿದ್ದಾರೆ.

ಆರೋಪಿಗೆ ಕಠಿನ ಶಿಕ್ಷೆ: ಒತ್ತಾಯ
ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪಿಗೆ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ವಿಹಿಂಪ, ಬಜರಂಗ ದಳ, ದುರ್ಗಾ ವಾಹಿನಿ, ಮಾತೃಶಕ್ತಿ ಮತ್ತು ಚಿಲಿಂಬಿ ಓಂ ಶ್ರೀ ಮಠದ ಪ್ರಮುಖರು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಓಂ ಶ್ರೀ ಮಠದ ಸ್ವಾಮಿ ಓಂ ವಿದ್ಯಾನಂದ ಸರಸ್ವತಿ, ಆರೋಪಿ ಆಸ್ತಿ ವಿಚಾರವಾಗಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಆರೋಪವಿದೆ. ಆದರೆ ಈ ಹಿಂದೆ ಈತ ಲೈಂಗಿಕ ಕಿರುಕುಳ ನೀಡಿದ್ದನ್ನೂ ಸಂತ್ರಸ್ತೆ ಹೇಳಿದ್ದಾಗಿ ಆರೋಪಿಸಿದರು. ವಿಹಿಂಪ ಮತ್ತು ಭಜರಂಗದಳ ವತಿಯಿಂದ ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಭಜರಂಗ ದಳದ ಜಿಲ್ಲಾ ಸಂಚಾಲಕ ಪ್ರವೀಣ್‌ ಕುತ್ತಾರ್‌ ತಿಳಿಸಿದರು.

ಮುಖ್ಯಮಂತ್ರಿ ಪರಿಹಾರಕ್ಕೆ ಶಿಫಾರಸು: ಸಚಿವ ಕೋಟ
ಮಂಗಳೂರು: ಆ್ಯಸಿಡ್‌ ದಾಳಿ ಸಂತ್ರಸ್ತೆ ಸ್ವಪ್ನಾ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಭೇಟಿ ಮಾಡಿದರು. ಸಂತ್ರಸ್ಥೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಶಿಫಾರಸು ಮಾಡುವುದಾಗಿ ಮತ್ತು ಪರಿಹಾರ ಮೊತ್ತ ತತ್‌ಕ್ಷಣ ಸಿಗುವಂತಾಗಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಕಾನೂನು ಸೇವಾ ಪ್ರಾಧಿ ಕಾರದ ವ್ಯಾಪ್ತಿಯಲ್ಲೂ ಗರಿಷ್ಠ ಪ್ರಮಾಣದ ಸುಟ್ಟಗಾಯಗಳನ್ನು ಹೊಂದಿರುವ ವ್ಯಕ್ತಿಗೆ 8 ಲಕ್ಷ ರೂ. ತನಕ ಪರಿಹಾರ ಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಮಹಿಳಾ ಮತ್ತು ಕುಟುಂಬ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕ ಉಸ್ಮಾನ್‌ ತಿಳಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್‌, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್‌ ಉಪಸ್ಥಿತರಿದ್ದರು.

ಸಂತ್ರಸ್ತೆ ಸ್ವಪ್ನಾರ ನೋವಿನ ಮಾತು
ಸಂತ್ರಸ್ತ ಮಹಿಳೆಯ ಹೆಸರಿನಲ್ಲಿ ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ ಚಿಲಿಂಬಿಯಲ್ಲಿ ಖಾತೆ ತೆರೆಯಲಾಗಿದ್ದು, ಸಹೃದಯರು ನೆರವು ನೀಡಬಹುದು.
ಬ್ಯಾಂಕ್‌ ಖಾತೆ ವಿವರ: ಹೆಸರು: ಸ್ವಪ್ನಾ
ಖಾತೆ ಸಂಖ್ಯೆ: 20494114947
ಐಎಫ್‌ಎಸ್‌ಸಿ ಕೋಡ್‌: SBIN0040954
ಬ್ಯಾಂಕ್‌: ಎಸ್‌ಬಿಐ ಚಿಲಿಂಬಿ

Advertisement

Udayavani is now on Telegram. Click here to join our channel and stay updated with the latest news.

Next