Advertisement

ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ದಾಳಿ: ಆ್ಯಸಿಡ್‌ ಒದಗಿಸಿದವರನ್ನು ವಶಕ್ಕೆ ಪಡೆದ ಪೊಲೀಸರು

12:53 AM Mar 13, 2024 | Team Udayavani |

ಕಡಬ: ಪ್ರೀತಿ ನಿರಾಕರಣೆಯ ಆಕ್ರೋಶದಿಂದ ಮಾ. 4ರಂದು ಬೆಳಗ್ಗೆ ಕಡಬ ಸರಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದ ತನ್ನ ಪ್ರೇಯಸಿ ಸೇರಿದಂತೆ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ಎರಚಿ ಗಾಯಗೊಳಿಸಿದ ಆರೋಪಿಗೆ ಆ್ಯಸಿಡ್‌ ಒದಗಿಸಿದ ಆರೋಪದಲ್ಲಿ ತಮಿಳುನಾಡಿನ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ವಾಯಿಕಡವು ಗ್ರಾಮದ ಅಡಕ್ಕರ ನಿವಾಸಿ ಅಬಿನ್‌ ಸಿಬಿ (22) ತನ್ನ ಊರಿನಿಂದ ರೈಲಿನ ಮೂಲಕ ತಮಿಳುನಾಡಿನ ಕೊಯಮತ್ತೂರಿಗೆ ತೆರಳಿ ಆ್ಯಸಿಡ್‌ ಖರೀದಿಸಿ ತಂದಿರುವುದು ಪೊಲೀಸರ ತನಿಖೆಯ ವೇಳೆ ಬಯಲಾಗಿತ್ತು. ಘಟನೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಹೆಚ್ಚಿನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ಪಡೆದಿದ್ದರು.

ಕಡಬದಲ್ಲಿ ಘಟನೆ ನಡೆದಿದ್ದ ಕಾಲೇಜಿಗೆ, ಮೊಬೈಲ್‌ ಚಾರ್ಜ್‌ಗೆ ಇರಿಸಿದ್ದ ಬೇಕರಿಗೆ, ಬಟ್ಟೆ ಬದಲಾಯಿಸಿದ್ದ ಜಾಗಕ್ಕೆ ಸೇರಿದಂತೆ ಆರೋಪಿ ಸಂಚರಿಸಿದ್ದ ಇನ್ನಿತರ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ದು ವಿಸ್ತೃತ ತನಿಖೆ ನಡೆಸಿದ್ದ ಪೊಲೀಸರು ಹೆಚ್ಚಿನ ತನಿಖೆಗಾಗಿ ಕೇರಳ ಹಾಗೂ ತಮಿಳುನಾಡಿಗೆ ಕರೆದೊಯ್ದಿದ್ದರು. ತಮಿಳುನಾಡಿನಲ್ಲಿ ಆರೋಪಿಗೆ ಆ್ಯಸಿಡ್‌ ನೀಡಿದ್ದ ಅಂಗಡಿಯ ಮಾಲಕ ಹಾಗೂ ಇನ್ನೋರ್ವನನ್ನು ಕಡಬಕ್ಕೆ ಕರೆತಂದಿರುವ ಪೊಲೀಸರು ಅವರಿಂದ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ನ್ಯಾಯಾಂಗ ಬಂಧನ
ಆರೋಪಿ ಅಬಿನ್‌ ಸಿಬಿಯನ್ನು ನ್ಯಾಯಾಲಯದ ಮೂಲಕ ಕಸ್ಟಡಿಗೆ ಪಡೆದಿದ್ದ ಪೊಲೀಸರು ವಿಸ್ತೃತ ತನಿಖೆ ನಡೆಸಿ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬ್ಯಾಗಿನಲ್ಲಿತ್ತು ಬುರ್ಖಾ, ಚೂರಿ!
ಕೇರಳದಿಂದ ರೈಲಿನಲ್ಲಿ ಮಾ. 3ರಂದು ರಾತ್ರಿ ಮಂಗಳೂರಿಗೆ ಬಂದಿಳಿದಿದ್ದ ಆರೋಪಿ ಅಬಿನ್‌ ಸಿಬಿ ರೈಲು ನಿಲ್ದಾಣದಲ್ಲಿಯೇ ರಾತ್ರಿ ಕಳೆದು ಮರುದಿನ ಮುಂಜಾನೆ ಬಸ್‌ ಹತ್ತಿ ಕಡಬಕ್ಕೆ ಬಂದು ತಲುಪಿದ್ದ. ಕಾಲೇಜಿನ ವರಾಂಡದಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ಎರಚಿ ಪರಾರಿಯಾಗಲೆತ್ನಿಸಿದಾಗ ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆತನ ಬ್ಯಾಗನ್ನು ಪರಿಶೀಲಿಸಿದಾಗ ಒಂದು ಬುರ್ಖಾ ಹಾಗೂ ಚೂರಿ ಪತ್ತೆಯಾಗಿತ್ತು. ಒಂದು ವೇಳೆ ಆ್ಯಸಿಡ್‌ ದಾಳಿ ನಡೆಸಲು ಸಾಧ್ಯವಾಗದಿದ್ದರೆ ಆತ ತನ್ನ ಗುರಿಯಾಗಿದ್ದ ವಿದ್ಯಾರ್ಥಿನಿಯ ಮೇಲೆ ಚೂರಿಯಿಂದ ದಾಳಿ ಮಾಡುವ ಸಾಧ್ಯತೆಗಳಿತ್ತು ಹಾಗೂ ಘಟನೆಯ ಬಳಿಕ ತನ್ನ ಗುರುತು ಸಿಗದಂತೆ ಬುರ್ಖಾ ಧರಿಸಿ ಪರಾರಿಯಾಗುವ ಉದ್ದೇಶದಿಂದ ಬುರ್ಖಾ ತಂದಿರಬಹುದು ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next