ಬೆಂಗಳೂರು: ವೈಯಕ್ತಿಕ ಸಂಬಂಧದಿಂದ ದೂರವಾದರು ಎಂಬ ಕಾರಣಕ್ಕೆ ಬಿಎಂಟಿಸಿ ಮಹಿಳಾ ನಿರ್ವಾಹಕಿ ಮೇಲೆ ಸಂಬಂಧಿಕನೇ ಆ್ಯಸಿಡ್ ಎರಚಿದ್ದ ಎಂಬ ವಿಷಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಇಂದಿರಾಬಾಯಿ ಅವರಿಗೆ ಆ್ಯಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಚಾಲಕ, ನಿರ್ವಾಹಕ ಅರುಣ್ ನಾಯ್ಕ ಮತ್ತು ಕುಮಾರ್ ನಾಯ್ಕ ಎಂಬವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತನ್ನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ಇಂದಿರಾಬಾಯಿ ಅವರ ಮೇಲೆ ಸ್ನೇಹಿತ ಕುಮಾರ್ ನಾಯ್ಕ ಜತೆ ಸೇರಿ ಆ್ಯಸಿಡ್ ದಾಳಿ ನಡೆಸಿದ್ದಾಗಿ ಪ್ರಮುಖ ಆರೋಪಿ ಅರುಣ್ ನಾಯ್ಕ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಸಂತ್ರಸ್ತೆ ಇಂದಿರಾಬಾಯಿ ಅವರಿಗೆ ಸಂಬಂಧದಲ್ಲಿ ಅರುಣ್ ನಾಯ್ಕ ಮೈದುನ ಆಗುತ್ತಾನೆ. ಈ ಹಿಂದೆ ಇಬ್ಬರು ಆತ್ಮೀಯತೆಯಿಂದ ಇದ್ದರು. ಆದರೆ ಇಂದಿರಾಬಾಯಿ ಅವರು ಇತ್ತೀಚೆಗೆ ಅರುಣ್ ಜತೆ ಸ್ನೇಹ ಕಡಿತಗೊಳಿಸಿದ್ದರು. ಇದರಿಂದ ಕೋಪಗೊಂಡಿದ್ದ ಆತ ಡಿ.19ರಂದು ಆಕೆ ಕೆಲಸಕ್ಕೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಸ್ನೇಹಿತನ ಜತೆ ಬಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಇಂದಿರಾಬಾಯಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.