Advertisement

ಮುಚ್ಚುವ ಭೀತಿಯಿಂದ ಬಚಾವಾದ ಅಚ್ರಪ್ಪಾಡಿ ಶಾಲೆ

11:32 PM Jun 05, 2019 | Team Udayavani |

ಗುತ್ತಿಗಾರು: ಮಕ್ಕಳ ಕೊರತೆಯಿಂದ ಮುಚ್ಚುವ ಭೀತಿ ಎದುರಿಸುತ್ತಿದ್ದ ಕನ್ನಡ ಶಾಲೆಯೊಂದು ಊರವರ ಸತತ ಪ್ರಯತ್ನದಿಂದ ಬಚಾವಾಗಿದೆ. ಮೂರು ವರ್ಷಗಳಲ್ಲೇ ಅತೀ ಹೆಚ್ಚು ಮಕ್ಕಳ ದಾಖಲಾತಿಯಿಂದಾಗಿ ಶಾಲೆ ಬಾಗಿಲು ಹಾಕುವುದನ್ನು ತಪ್ಪಿಸಿಕೊಂಡಿದೆ.

Advertisement

ದೇವಚಳ್ಳ ಗ್ರಾಮದ ಅಚ್ರಪ್ಪಾಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ನೇ ಸಾಲಿನಲ್ಲಿ 12 ಮಕ್ಕಳಷ್ಟೇ ದಾಖಲಾಗಿದ್ದರು. ಅದರಲ್ಲೂ ಒಂದನೇ ತರಗತಿಗೆ ಒಂದೇ ಮಗು ದಾಖಲಾತಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಶಾಲೆ ಮುಚ್ಚುವ ಭೀತಿ ಕಾಡಿತ್ತು. ಈ ಶಾಲೆ ಯನ್ನು ಉಳಿಸಿಕೊಳ್ಳಬೇಕೆಂಬ ಗ್ರಾಮಸ್ಥರ ಪ್ರಯತ್ನದ ಫ‌ಲವಾಗಿ ಈ ವರ್ಷ 21 ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಮಕ್ಕಳಿಗಾಗಿ ಮನೆ ಭೇಟಿ
ಊರಿನಿಂದ ಖಾಸಗಿ ಹಾಗೂ ಹೊರ ಭಾಗದ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳನ್ನು ಮನೆ ಭೇಟಿ ಮುಖಾಂತರ ಅಚ್ರಪ್ಪಾಡಿ ಶಾಲೆಗೆ ದಾಖಲಿಸಿಕೊಳ್ಳಲಾಗಿದೆ. ಹೆತ್ತವರ ಮನವೊಲಿಸಿ 1ರಿಂದ 5ನೇ ತರಗತಿ ವರೆಗೆ ಹೊರ ಭಾಗದ ಶೈಕ್ಷಣಿಕ ಕೇಂದ್ರಗಳಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಇಲ್ಲಿಗೆ ಬರುವಂತೆ ಮಾಡಲಾಗಿದೆ. ಒಟ್ಟು 21 ಮಕ್ಕಳು 2019-20ನೇ ಸಾಲಿಗೆ ದಾಖಲಾತಿ ಪಡೆದಿದ್ದು, ಒಂದನೆ ತರಗತಿಗೆ 8 ಮಕ್ಕಳು ಸೇರಿದ್ದಾರೆ.

ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಗ್ರಾ.ಪಂ. ಸದಸ್ಯ ಶಿವಪ್ರಕಾಶ್‌ ಅಡ್ಡನಪಾರೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷೆ ನಿರ್ಮಲಾ ಹರಿಶ್ಚಂದ್ರ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

1ನೇ ತರಗತಿಗೆ ದಾಖಲಾಗುವ ಮಕ್ಕಳ ಹೆಸರಿನಲ್ಲಿ 1 ಸಾವಿರ ರೂ.ಗಳ ನಿರಖು ಠೇವಣಿ ಇಟ್ಟು, 5ನೇ ತರಗತಿ ಪಾಸಾಗಿ ಹೋಗುವಾಗ ಠೇವಣಿ ಹಾಗೂ ಬಡ್ಡಿಯನ್ನು ಕೊಡುವುದು, ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ, ದಾನಿಗಳ ನೆರವಿನಿಂದ ಉಚಿತ ಬ್ಯಾಗ್‌, ಕೊಡೆ, ನೋಟ್ಬುಕ್‌ ವಿತರಣೆ, ಹೊಸದಾದ ಬೆಂಚ್, ಡೆಸ್ಕ್ಗಳು – ಹೀಗೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯ ವ್ಯವಸ್ಥೆ, ನೃತ್ಯ ತರಬೇತಿಯನ್ನೂ ಕೊಡಿಸಲಾಗುತ್ತಿದೆ.

Advertisement

ಶಾಲೆಗೆ ಹಿರಿಮೆ
ದೇವಚಳ್ಳ ಗ್ರಾ.ಪಂ. ವ್ಯಾಪ್ತಿಯ ಅತ್ಯಂತ ಸ್ವಚ್ಛ ಶಾಲೆ ಪ್ರಶಸ್ತಿ, ಕನ್ನಡ ರಾಜ್ಯೋತ್ಸವದಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕಿರಿಯ ಪ್ರಾಥಮಿಕ ಶಾಲೆ ಮುಂತಾದ ಪ್ರಶಸ್ತಿಗಳನ್ನು ಅಚ್ರಪ್ಪಾಡಿ ಶಾಲೆ ಬಾಚಿಕೊಂಡಿದೆ.

ಅತಿಥಿ ಶಿಕ್ಷಕರ ಅಗತ್ಯವಿದೆ
ಮುಚ್ಚುವ ಭೀತಿಯಲ್ಲಿದ್ದ ಅಚ್ರಪ್ಪಾಡಿ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗಿದ್ದರೂ ಶಿಕ್ಷಕರ ಕೊರತೆ ಇದೆ. ಸರ್ಕಾರದಿಂದ ನಿಯೋಜಿತ ಓರ್ವ ಶಿಕ್ಷಕಿಯಿದ್ದು ಶಾಲೆಗೆ ಅತಿಥಿ ಶಿಕ್ಷಕರ ಅಗತ್ಯವಿದೆ. ಕಳೆದ ಬಾರಿ ಅತಿಥಿ ಶಿಕ್ಷಕರಾಗಿದ್ದ ಒಬ್ಬರು ಹೆತ್ತವರ ಒತ್ತಾಸೆಯಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೂ ಶಿಕ್ಷಣ ಇಲಾಖೆಯಿಂದ ಅನುಮೋದನೆ ಸಿಗಬೇಕಾಗಿದೆ.

ಅಭಿವೃದ್ಧಿಯೇ ನಮ್ಮ ಗುರಿ
ಉತ್ತಮ ಪರಿಸರದಲ್ಲಿ ನಿರ್ಮಾಣವಾಗಿರುವ ಶಾಲೆ ಮುಚ್ಚಿಹೋಗುವ ಭೀತಿ ಕಳೆದ ವರ್ಷ ಇತ್ತು. ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಯೇ ನಮ್ಮ ಗುರಿ..
– ಶ್ವೇತಾ, ಮುಖ್ಯ ಶಿಕ್ಷಕಿ

ಇಲಾಖೆಯೂ ಸಹಕರಿಸಲಿ
ನಮ್ಮೂರ ಶಾಲೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನಾವು ಪ್ರಯತ್ನಿಸಿದ್ದೇವೆ. ನಮ್ಮ ಜೊತೆ ಇಲಾಖೆಯೂ ಸಹಕರಿಸಿದರೆ ಶಾಲೆ ಉತ್ತಮವಾಗಿ ಬೆಳೆಯಲು ಸಹಕಾರಿ
– ಶಿವಪ್ರಕಾಶ್‌ ಅಡ್ಡನಪಾರೆ ಗ್ರಾ.ಪಂ. ಸದಸ್ಯರು

-ಕೃಷ್ಣಪ್ರಸಾದ್‌ ಕೊಲ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next