Advertisement

ಪರಿಶ್ರಮದಿಂದ ಗುರಿಯೆಡೆಗೆ ಸಾಗಬೇಕು

10:50 PM Apr 10, 2022 | Team Udayavani |

ನವ ಬದುಕು ಎನ್ನುವುದು ಅನಿಶ್ಚಿತ. ಎಲ್ಲವೂ ನಾವು ಅಂದುಕೊಂಡಂತೆ ನಡೆಯಲಾರದು. ಹೀಗಾಗಿಯೇ ಬದುಕು ಯಾರ ಊಹೆಗೂ ನಿಲುಕದ್ದು. ಹಾಗೆಂದು ನಮ್ಮ ಬದುಕನ್ನು ಬೇಕಾಬಿಟ್ಟಿಯಾಗಿ ಸವೆಸ ಲಾಗದು. ಸ್ಪಷ್ಟ ಗುರಿಯೊಂದನ್ನು ಇರಿಸಿಕೊಂಡು ಅದನ್ನು ತಲುಪುವ ದೃಢ ಸಂಕಲ್ಪವನ್ನು ತೊಟ್ಟರೆ ನಾವು ಯಶಸ್ವೀ ಬದಕನ್ನು ಬಾಳಬಹುದು.

Advertisement

ಬಾಲ್ಯದಲ್ಲಿ ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಲ್ಲಿ “ನಿಮ್ಮ ಗುರಿ ಏನು’ ಎಂದು ಪ್ರಶ್ನಿಸಿರುತ್ತಾರೆ. ಆಗ ಮಕ್ಕಳು ತಮ್ಮ ತಮ್ಮ ಚಿತ್ತದಲ್ಲಿ ಮೂಡಿದ ದೊಡ್ಡ ದೊಡ್ಡ ಹುದ್ದೆ, ವೃತ್ತಿ ಅಥವಾ ತಮ್ಮ ಅನುಭವದನುಸಾರ ಗುರಿಗಳ ಪಟ್ಟಿಯನ್ನು ಮುಂದಿಡುತ್ತಾರೆ. ಆದರೆ ವಯಸ್ಸಾಗುತ್ತಿದಂತೆಯೇ ಈ ಗುರಿಗಳು, ಕನಸುಗಳು ಬದಲಾಗುತ್ತಿರುತ್ತವೆ. ಶಿಕ್ಷಣದ ಸಂದರ್ಭದಿಂದಲೇ ನಾವು ನಮ್ಮ ಗುರಿಯತ್ತ ಮುಖ ಮಾಡಿ ಸಾಗಿದ್ದೇ ಆದಲ್ಲಿ ಅದನ್ನು ತಲುಪುವುದು ಕಷ್ಟದ ಮಾತೇನಲ್ಲ. ಗುರಿ ಸಾಧನೆಗೆ ಪರಿಶ್ರಮ ಬಲುಮುಖ್ಯ. ಸಾಧನೆಯ ಹಾದಿ ಅದೆಷ್ಟೋ ಸಂದರ್ಭದಲ್ಲಿ ಸರಳ ಎನಿಸಬಹುದು, ಮತ್ತೆ ಕೆಲವೊಮ್ಮ ಕಠಿನ ಎಂದೆನಿಸಬಹುದು. ಆದರೆ ಅದೇನೆ ಇರಲಿ ದೃಢ ಮನಸ್ಸಿನಿಂದ ನಾವು ಮುನ್ನಡೆದಾಗ ಗುರಿ ಸಾಧನೆ ಕಷ್ಟಸಾಧ್ಯವೇನಲ್ಲ. ನಮ್ಮ ಗುರಿ ಮತ್ತು ಹಾದಿ ನಿಖರವಾಗಿದ್ದು ಆತ್ಮವಿಶ್ವಾಸ ದಿಂದ ಮುನ್ನಡೆದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ.

ನಮ್ಮ ಬದುಕು ಎನ್ನುವುದು ಒಂದು ನದಿಯಂತೆ, ಅದು ನಿರಂತರವಾಗಿ ಹರಿಯುತ್ತಿದ್ದರಷ್ಟೇ ಅದಕ್ಕೆ ಬೆಲೆ. ಮೋಡದಲ್ಲಿರುವ ಒಂದು ಹನಿಯು ಬೇರ್ಪಟ್ಟು ನೆಲಕ್ಕೆ ಬಿದ್ದ ಕೂಡಲೇ ತಗ್ಗಿರುವ ಕಡೆಗೆ ಹರಿಯಲು ಪ್ರಯತ್ನಿಸು ತ್ತದೆ. ಹೀಗೆ ಭೂಮಿಗೆ ಮಳೆಯಾಗಿ ಸುರಿಯುವ ಹನಿ ಹನಿಗಳೆಲ್ಲ ಒಟ್ಟು ಸೇರಿದಾಗ ಹಳ್ಳವಾಗಿ, ಆ ಬಳಿಕ ತೊರೆಯಾಗಿ ಹರಿಯುತ್ತದೆ. ಈ ತೊರೆಯು ನದಿಯಾಗಿ ಮಾರ್ಪಟ್ಟು ಕಾಡು ಮೇಡು, ಬೆಟ್ಟಗುಡ್ಡ, ಕಣಿವೆ ಕೊರಕಲು ಗಳನ್ನು ದಾಟಿ ಎಷ್ಟೇ ಕಷ್ಟಗಳು ಬಂದರೂ ಕೊನೆಗೆ ಸಮುದ್ರವನ್ನು ಸೇರಿ ತಾನೇ ಸಮುದ್ರವಾಗುತ್ತದೆ. ನಾವೂ ಅದೇ ನೀರಿನ ಹನಿಯಂತೆ. ಎಷ್ಟೇ ಕಾಠಿನ್ಯಗಳು ಬಂದೊದಗಿದರೂ ದೃಢವಾದ ನಿರ್ಧಾರದಿಂದ ನಮ್ಮ ಗುರಿಯ ಕಡೆಗೆ ಸಾಗಬೇಕು.

ಒಂದು ಸಣ್ಣ ನೀರಿನ ಹನಿಯು ಬಯಲಿನ ಗಿಡದ ಎಲೆಯ ಮೇಲೆ ಕುಳಿತುಕೊಂಡು ಆತ್ಮವಿಶ್ವಾಸದಿಂದ ಆಕಾಶದ ಕಡೆಗೆ ನೋಡುತ್ತಿತ್ತು. ಅದೇ ವೇಳೆಗೆ ಅಲ್ಲಿಗೆ ಒಬ್ಬ ರೈತ ಬಂದು ಆಗಸ
ವನ್ನು ನೋಡುತ್ತಿದ್ದ ಹನಿಯಲ್ಲಿ “ನೀನು ಬಯಲಲ್ಲಿ ಎಲೆಯ ಮೇಲೆ ಕುಳಿತು ಏನು ಮಾಡುತ್ತಿದ್ದೀಯಾ’ ಎಂದು ಕೇಳಿದ.

ಆಗ ಆ ಹನಿಯು, ನಾನು ಆಕಾಶದೆತ್ತ ರಕ್ಕೆ ಏರುವ ಕನಸನ್ನು ಕಾಣುತ್ತಿದ್ದೇನೆ ಎಂದು ಹೇಳಿತು. ಆಗ ಆ ರೈತನು, “ಎಲಾ ಮಂಕೇ, ನೀನು ಸಣ್ಣ ಕಾಳಿನಷ್ಟು ಗಾತ್ರವಿಲ್ಲ, ಅದು ಹೇಗೆ ಆಕಾಶಕ್ಕೆ ಏರುತ್ತೀಯಾ?’ ಎಂದು ಹೀಯಾಳಿಸಿ ನಕ್ಕನು. ಆಗ ಸಣ್ಣ ನೀರಿನ ಹನಿಯು, “ನೀನೇ ನೋಡುತ್ತಿರು, ನಾನು ಹೇಗೆ ಆಕಾಶಕ್ಕೇರುತ್ತೇನೆ’ ಎಂದು ಹೇಳಿತು. ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿ
ಸುವುದನ್ನೇ ಕಾಯುತ್ತಿದ್ದ ಹನಿಯು ಸೂರ್ಯೋದಯವಾದ ಕೂಡಲೇ ಸೂರ್ಯನ ಕಿರಣಗಳಿಗೆ ಒಂದಷ್ಟು ಹೊತ್ತು ಮುಖವೊಡ್ಡಿತು. ಸೂರ್ಯನ ಪ್ರಖರತೆಗೆ ಹನಿಯು ಆವಿಯಾಗಿ ಆಗಸದ ಕಡೆಗೆ ಸಾಗಿ ಅಲ್ಲಿ ಮೋಡವಾಗಿ ತೇಲಾಡತೊಡಗಿತು. ಇದನ್ನು ನೋಡಿದ ರೈತನು ಹನಿಯ ದೃಢ ನಿರ್ಧಾರ ಮತ್ತು ಛಲವನ್ನು ಕಂಡು ಖುಷಿಯಿಂದ ಅಲ್ಲಿಂದ ಮುಂದಕ್ಕೆ ಸಾಗಿದ.

Advertisement

ಮನುಷ್ಯನಾಗಿ ನಾವೂ ಜೀವವಿಲ್ಲದ ನೀರಿನಲ್ಲಿ ಇರುವಂತಹ ಛಲ, ದೃಢ ವಾದ ಆತ್ಮವಿಶ್ವಾಸ ಮತ್ತು ಅಚಲವಾದ ನಿರ್ಧಾರದ ಮೂಲಕ ಬದುಕಿನ ಗುರಿಯ ಕಡೆಗೆ ವಿಶ್ವಾಸದಿಂದ ಸಾಗು ವಂತಹ ಪ್ರಯತ್ನವನ್ನು ಮಾಡಬೇಕು. ನೀರಿನ ಹನಿಯು ಸೂರ್ಯನು ಬಂದೇ ಬರುವ ಎಂದು ಕಾದು ಸೂರ್ಯನ ಮೂಲಕ ತನ್ನ ಜೀವನದಲ್ಲಿ ಸಾರ್ಥಕತೆಯನ್ನು ಕಂಡಂತೆ ನಮ್ಮ ಜೀವನದ ಸಾರ್ಥಕತೆಯನ್ನು ಸತತ ಪ್ರಯತ್ನದ ಮೂಲಕ ಕಾಣಬೇಕು. ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಹಾಡೇ ಇರುವಂತೆ ಗುರಿಗಾಗಿ ನಿರಂತರ ಪ್ರಯತ್ನ ಅತ್ಯಂತ ಮುಖ್ಯ.

– ಸಂತೋಷ್‌ ರಾವ್‌, ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next