ತೀರ್ಥಹಳ್ಳಿ: ಎಡೆಬಿಡದೆ ಸದ್ದು ಮಾಡುವ ತುಂಗಾನದಿ ಹೊಳೆಯ ಮಧ್ಯ ಹೆಬ್ಬಂಡೆ ಜುಳುಜುಳು ನೀರಿನ ಶಬ್ದದ ನಡುವೆ ಪಕ್ಕದ ತೋಟದಲ್ಲಿ ವಿಸ್ತಾರವಾಗಿ ಹಸಿರು ಹೊದಿಕೆ ಹೊದ್ದಿರುವ ಅಡಿಕೆ ತೋಟ. ಮನೆಯ ಸುತ್ತಲೂ ಪಸರಿಸಿರುವ ವಿವಿಧ ತಳಿಯ ಸಸ್ಯ ರಾಶಿ.. ಇದರ ನಡುವೆ ಸಾವಯವ ಕೃಷಿ ನೆಚ್ಚಿಕೊಂಡುತಮ್ಮದೇ ಕಲ್ಪನೆಯಲ್ಲಿ ಜಮೀನನ್ನು ಸುಂದರವಾಗಿ ರೂಪಿಸಿರುವ ತಮ್ಮ 62 ವರ್ಷದ ಲಕ್ಷಿ¾àಪುರ ಅಶೋಕ್ ಅವರು ಏಲಕ್ಕಿ ಬೆಳೆದು ಮಾದರಿಯಾಗಿದ್ದಾರೆ.
ಮೇಲಿನ ಕುರುವಳ್ಳಿ ಗ್ರಾಪಂ ವ್ಯಾಪ್ತಿಯ ತುಂಬಡಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಡಕೆ, ತೆಂಗು, ಬಾಳೆ, ಕೋಕೋ, ವೀಳ್ಯದೆಲೆ, ಕಾಳುಮೆಣಸು, ಕಾಫಿ, ಏಲಕ್ಕಿ, ಜಾಯಿಕಾಯಿ, ಲವಂಗ ಸೇರಿದಂತೆ ಸ್ಥಳೀಯವಾಗಿ ಲಭ್ಯವಿರುವ ಔಷ ಧೀಯ ಸಸ್ಯಗಳುಒಳಗೊಂಡಂತೆ ಅವರ ತೋಟದಲ್ಲಿ ಗಿಡಗಳುಕಾಣಸಿಗುತ್ತವೆ. ನಿತ್ಯ ಬೆಳಗಾದರೆ ತೋಟದಲ್ಲಿಅವರು ಕಾಯಕವೇ ಕೈಲಾಸ ಎನ್ನುವ ಹಾಗೆತಮ್ಮದೇ ಕನಸಿನಂತೆ ಜಮೀನನ್ನು, ರೂಢಿಸಿಕೊಂಡು ಬರುತ್ತಿದ್ದಾರೆ.
ಅಶೋಕ್ ಅವರು ಈ ಹಿಂದೆ ಅರಣ್ಯ ಇಲಾಖೆಯ ವಾಚರ್ ಆಗಿ ನಂತರ ಕೆಲವು ಸಮಯ ಗಾರ್ಡ್ ಆಗಿ ನಿವೃತ್ತಿ ಪಡೆದು ಇದೀಗ ಕೃಷಿ ಕ್ಷೇತ್ರದಲ್ಲಿ ತೊಡಗಿದ್ದಾರೆ. ತಮ್ಮ ತೋಟದ ಮಧ್ಯೆ ದನದ ಕೊಟ್ಟಿಗೆ ನಿರ್ಮಿಸಿ ಎರಡು ಎಚ್‌ಎಫ್ ಜರ್ಸಿ ದನಗಳನ್ನು ಸಾಕಿ ಹೈನುಗಾರಿಕೆಯನ್ನು ಸಹ ಮಾಡುತ್ತ ನಿತ್ಯ ತಮ್ಮ ಉಪ ಕಸುಬಿನ ಜೊತೆಗೆ ಹಾಲು ಮಾರಾಟದಲ್ಲೂ ನಿರತರಾಗಿದ್ದಾರೆ. ಕೃಷಿಯಲ್ಲಿ ಪ್ರೇರಿತರಾದ ಇವರು ಒಮ್ಮೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿಯೋಜನೆ ಮಾಡಿದ ಪ್ರವಾಸದಲ್ಲಿತೊಡಗಿ ಸಾಗರದಲ್ಲಿ ಒಬ್ಬರು ಪ್ರಗತಿಪರ ಕೃಷಿಕರು ತೋಟದಲ್ಲಿ ತೊಡಗಿಸಿದ ಸಾವಯವ ಗೊಬ್ಬರ ಮಿಶ್ರಣ ಸಂಗ್ರಹಣಾ ಘಟಕ ನೋಡಿ ಬಂದುತಮ್ಮ ತೋಟದಲ್ಲಿ ಯಾಕೆ ಇದನ್ನು ಅಳವಡಿಸಬಾರದು ಎಂಬ ಕಲ್ಪನೆಯಿಂದ ತಮ್ಮ ತೋಟದ ಮಧ್ಯೆ ಒಂದುಸಾವಿರ ಲೀಟರ್ ಸಾಮರ್ಥಯದ ಟ್ಯಾಂಕ್ ಇಟ್ಟು ಅದರಿಂದ ನೂರು ಮೀಟರ್ ದೂರವಿರುವ ಕೊಟ್ಟಿಗೆಗೆ ಪೈಪ್ ಮುಖಾಂತರ ಸಂಪರ್ಕ ಅಳವಡಿಸಿದ್ದಾರೆ.
ಕೊಟ್ಟಿಗೆಯಲ್ಲಿ ತಾವು ನಿತ್ಯ ದನಗಳನ್ನು ತೊಳೆದ ನೀರು ಹಾಗೂ ಗೋಮೂತ್ರ ಮಿಶ್ರಿತ ಸಗಣಿ ನೀರುಹಾದು ಹೋಗಿ ತೋಟದ ಮಧ್ಯದಲ್ಲಿರುವ ಟ್ಯಾಂಕ್‌ಗೆ ತುಂಬುತ್ತದೆ. ಈ ನೀರು ಕೆಲವೇ ವಾರದಲ್ಲಿ ಜೀವಾಮೃತವಾಗಿ ಪರಿವರ್ತನೆಗೊಳ್ಳುತ್ತದೆ. ಈ ಪರಿವರ್ತನೆಯಾದ ಗೋಮೂತ್ರ ತಾವು ಬೆಳೆದ ಏಲಕ್ಕಿ, ಕಾಳುಮೆಣಸು ಇನ್ನಿತರ ಸಸಿಗಳಿಗೆ ಹಾಕಿ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾವಯವ ಕೃಷಿಗೆ ಮಡದಿ ಗಂಗಮ್ಮ ಮತ್ತು ಮಗ ಅರುಣ್ ಕುಮಾರ್ ಅವರ ಅವರ ಸಂಪೂರ್ಣ ಸಹಕಾರವಿದ್ದು ಎಲ್ಲಾ ಕೆಲಸ ಕಾರ್ಯಗಳಿಗೆ ಜೊತೆಗೂಡುತ್ತಾರೆ. ತೀರ್ಥಹಳ್ಳಿಯ ಕುರುವಳ್ಳಿ ಪುತ್ತಿಗೆ ಮಠ ರಸ್ತೆಯಲ್ಲಿ ಒಂದೂವರೆ ಕಿಮೀ ಹೋದರೆ ತುಮ್ಡಿ ಸಮೀಪದಲ್ಲಿ ಅಶೋಕ್ ಅವರ ಮನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಏಲಕ್ಕಿ ಬೋರ್ಡ್, ಫಾರಂನಿಂದ ಒಂದೆರಡು ಏಲಕ್ಕಿ ಗಿಡ ತಂದು ಮೊದಲ ಬಾರಿಗೆ ನೆಟ್ಟಿದ್ದಾರೆ. ನಂತರ ಗಿಡ ಮಾಡಿ ತಮ್ಮ ತೋಟದ ಮಧ್ಯೆ ನೆಟ್ಟು ಸ್ವತಃ ತಾವೇ ಕೃಷಿಯಲ್ಲಿ ತೊಡಗಿ ಉತ್ತಮ ಇಳುವರಿ ಪಡೆದು ತಮ್ಮ ಆದಾಯ ದುಪ್ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅವರನ್ನು (ದೂ: 9731159612)ಸಂಪರ್ಕಿಸಬಹುದು.
ಕೋವಿಡ್ ಮಹಾಮಾರಿಗೆ ಹೆದರಿ ಮಾನಸಿಕ ನೆಮ್ಮದಿ ಹುಡುಕಿಕೊಂಡು ಇಂದು ಬೆಂಗಳೂರಿನಂತಹ ಮಹಾನಗರಗಳಿಂದ ಹಳ್ಳಿ ಕಡೆಗೆ ಜನರು ಮತ್ತು ಯುವಕರು ಮುಖ ಮಾಡುತ್ತ ಇದ್ದಾರೆ.ಇದರಿಂದ ಹಳ್ಳಿಗಳಲ್ಲಿ ಎಷ್ಟೋ ಪಾಳು ಬಿದ್ದ ಜಾಗಗಳು ಕೃಷಿ ಭೂಮಿಯಾಗಿ ಪರಿವರ್ತನೆಆಗುತ್ತಿರುವುದು ಸಂತೋಷ ತಂದಿದೆ. ಇದು ಆಶಾದಾಯಕ ಬೆಳವಣಿಗೆ ಕೂಡ.
– ಎಲ್. ಟಿ. ಅಶೋಕ್, ಸಾವಯವ ಕೃಷಿಕ
-ಶ್ರೀಕಾಂತ್ ವಿ. ನಾಯಕ್