ಧಾರವಾಡ: ಪ್ರತಿಯೊಬ್ಬ ನಾಗರಿಕನಿಗೆ ಸಿಗಬೇಕಾದ ಮೂಲ ಸೌಕರ್ಯಗಳೇ ಸಾಮಾಜಿಕ ನ್ಯಾಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶರಾದ ವಿ.ಶ್ರೀಶಾನಂದ ಹೇಳಿದರು. ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ನಗರದ ಡಾ|ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಎಲ್ಲರೂ ಸಂತೋಷದಿಂದ ಇರಬೇಕಾದರೆ ಪ್ರತಿಯೊಬ್ಬರಿಗೂ ಸಮಾನ ಸೌಕರ್ಯಗಳು ಲಭಿಸಬೇಕು. ಆ ದಿಸೆಯಲ್ಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದೆ. ಸಮಾಜದ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಸ್ನೇಹಲ್ ಆರ್ ಮಾತನಾಡಿ, ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಉದ್ಯೋಗ ಕೊಡಲಾಗುತ್ತಿದೆ. ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಲು ಪೂರೈಸಲಾಗುತ್ತಿದೆ.
ಬಿಪಿಎಲ್ ಕುಟುಂಬಕ್ಕೆ ಆಹಾರ ಧಾನ್ಯ ಮತ್ತು ವಸತಿ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಿ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರಡ್ಡಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಬಿ.ಎಸ್ ಸಂಗಟಿ, ಸಹಾಯಕ ಕಾರ್ಮಿಕ ಆಯುಕ್ತ ಎಸ್.ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಮುನಿರಾಜು ಮಾತನಾಡಿದರು.
ವಕೀಲರಾದ ಜೆ.ಎಲ್.ಗ್ರಾಮಪುರೋಹಿತ ನಿರೂಪಿಸಿ, ವಂದಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.