ಮುಂಬಯಿ: ತಾಯ್ನಾಡಿನಿಂದ ಮುಂಬಯಿ ಮಹಾನಗರಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಅಮ್ಮ ಆಶೀರ್ವದಿಸಿ ನೀಡಿದ ಬೆಳ್ಳಿಯ ನಾಣ್ಯ ಉದ್ದಿಮೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಕ್ಷಯ ಪಾತ್ರೆಯಾಗಿ ಬದುಕಿಗೆ ಹೊಸ ರೂಪ ನೀಡಿತು. ಅಕ್ಷಯ ಪತ್ರಿಕೆಯ ಮೂಲಕ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಬಿಲ್ಲವರ ಅಸೋಸಿಯೇಶನ್‌ನ ಮಾರ್ಗದರ್ಶಕ ಜಯ ಸಿ. ಸುವರ್ಣರ ಆದರ್ಶಮಯ ಜೀವನಕ್ಕು ಕೃತಜ್ಞನಾಗಿದ್ದೇನೆ. ಸುಮಾರು 23 ವರ್ಷಗಳ ಕಾಲ ಅಕ್ಷಯ ಮಾಸಿಕ ಪತ್ರಿಕೆಯಲ್ಲಿ ಗೌರವ ಸಂಪಾದಕನಾಗಿ ದುಡಿದು ಅಸಂಖ್ಯಾತ ಓದುಗರನ್ನು ಸಂಪಾದಿಸಿದ್ದೇನೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಆವಶ್ಯಕತೆ ಬದುಕಿನ ಸವಿಗೆ ಬೇಕು ಎಂದು ಸಾಹಿತಿ ಎಂ. ಬಿ. ಕುಕ್ಯಾನ್ ಅವರು ಅಭಿಪ್ರಾಯಿಸಿದರು.
ಜು. 8ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ 86ನೇ ವಾರ್ಷಿಕ ಮಹಾಸಭೆಯಲ್ಲಿ ಜ್ಞಾನ ಭಾಸ್ಕರ ಬಿರುದು ಮತ್ತು ಸಮ್ಮಾನ ಸ್ವೀಕರಿಸಿದ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ಇಲ್ಲಿ ಸೇವೆ ಸಲ್ಲಿಸಿದವರು ಯಶಸ್ವಿ ಬದುಕನ್ನು ಸಾಗಿಸುತ್ತಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳ ಅಗರವಾಗಿರುವ ಬಿಲ್ಲವರ ಅಸೋಸಿಯೇಶನ್ ಸಾವಿರಾರು ಮಂದಿಗೆ ದಾರಿದೀಪವಾಗಿದೆ. ಬರವಣಿಗೆಗೆ ಪ್ರೋತ್ಸಾಹಿಸಿದ ಬಿಲ್ಲವರ ಅಸೋಸಿಯೇಶನ್‌ನ ಸರ್ವ ಸದಸ್ಯರಿಗೆ, ಅಕ್ಷಯ ಮಂಡಳಿಗೆ, ಲೇಖಕರಿಗೆ, ಪತ್ರಿಕೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
ಇನ್ನೋರ್ವ ಯುವ ಸಮ್ಮಾನಿತ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಲಕ್ಷ್ಮೀಶ್ ಸುವರ್ಣ ಅವರು ಮಾತನಾಡಿ, ಕಾಶ್ಮೀರ, ರಾಜಸ್ಥಾನ್, ಮಣಿಪುರ, ಚೈನಾ ಗಡಿಭಾಗಗಳಲ್ಲಿ ಸೇವೆ ಸಲ್ಲಿದ್ದೇನೆ. ನನ್ನ 14 ವರ್ಷಗಳ ಸೇವಾವಧಿಯಲ್ಲಿ ತುಳುನಾಡಿನ ಯುವಕರ ಸಂಖ್ಯೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ವಿರಳವಾಗಿದೆ. ಪಾಲಕರು ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು ಪ್ರೇರೇಪಿಸಬೇಕು. ಈ ಬಗ್ಗೆ ಭಯ ಬೇಡ. ದೇಶಭಕ್ತಿಯಿರಲಿ. ಭಯೋತ್ಪಾದಕರ ನಿಗ್ರಹಕ್ಕಾಗಿ ಪದೋನ್ನತಿ ಹಾಗೂ ಹಲವಾರು ಪ್ರಶಸ್ತಿಗಳು, ನನಗೆ ಬಂದಿವೆ. ಇದು ಉದ್ಯೋಗವಲ್ಲ. ಜೀವನ ಹಾದಿ ಎಂದು ತಿಳಿದು ರಾಷ್ಟ್ರ ಸೇವೆಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು.
ಅಕ್ಷಯ ಮಾಸಿಕದ ಉಪ ಸಂಪಾದಕ ಹರೀಶ್ ಹೆಜ್ಮಾಡಿ ಸಮ್ಮಾನಿತರನ್ನು ಪರಿಚಯಿಸಿ ಸಮ್ಮಾನ ಪತ್ರ ವಾಚಿಸಿದರು. ಸಮಾರಂಭದಲ್ಲಿ ಸೇವಾದಳದ ಸದಸ್ಯ ದಿನೇಶ್ ಅಂಚನ್ ಅವರು ನಿರ್ಮಿಸಿದ ಬಿಲ್ಲವರ ಅಸೋಸಿಯೇಶನ್ ಸಾಧನೆ ಹಾಗೂ ಸಾಧಕರ ಕಿರು ಸಾಕ್ಷÂಚಿತ್ರವನ್ನು ಪ್ರದರ್ಶಿಸಲಾಯಿತು. ವಿಶೇಷ ಸಹಕಾರ ನೀಡಿದ ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ. ಆರ್. ಮೂಲ್ಕಿ, ಲೆಕ್ಕ ಪರಿಶೋಧಕರಾದ ಅಶ್ವಜಿತ್ ಹೆಜ್ಮಾಡಿ, ಗುರುನಾರಾಯಣ ರಾತ್ರಿಶಾಲೆಯ ಉಪ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಉಮೇಶ್ ಕರ್ಕೇರ, ಎಸ್‌ಎಸ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಕಿಶೋರ್ ಶಂಕರ್ ಪವಾರ್, ಅರ್ಜುನ್ ಕಾಂಬ್ಳೆ, ಗಂಗಾಧರ ಕ್ಯಾತಿ ಅವರನ್ನು ಗೌರವಿಸಲಾಯಿತು.
ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಅವರು ವಂದಿಸಿದರು. ವೇದಿಕೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವ ಜಾಗೃತಿ ಬಳಗದ ಮಾಜಿ ಅಧ್ಯಕ್ಷ ಎನ್. ಟಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷರುಗಳಾದ ಡಾ| ಯು. ಧನಂಜಯ ಕುಮಾರ್, ಶಂಕರ ಡಿ. ಪೂಜಾರಿ, ರಾಜ ವಿ. ಸಾಲ್ಯಾನ್, ಪುರುಷೋತ್ತಮ ಎನ್. ಕೋಟ್ಯಾನ್, ಜತೆ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್, ಹರೀಶ್ ಜಿ. ಸಾಲ್ಯಾನ್, ಪ್ರೇಮನಾಥ್ ಪಿ. ಕೋಟ್ಯಾನ್, ಆಶಾಲತಾ ಎಸ್. ಕೋಟ್ಯಾನ್, ಕೇಶವ ಕೆ. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಪೂಜಾರಿ ಕಾರ್ಕಳ, ಜತೆ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಶಿವರಾಮ್ ಎಸ್. ಪೂಜಾರಿ, ಸದಾಶಿವ ಎ. ಕರ್ಕೇರ, ಮೋಹನ್ ಡಿ. ಪೂಜಾರಿ, ದಳಪತಿ ಗಣೇಶ್ ಕೆ. ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್