ಸ್ಪರ್ಧಾತ್ಮಕ ಯುಗ ಎಲ್ಲವನ್ನೂ ವೇಗವಾಗಿಸಿದೆ. ಎಷ್ಟು ಕಲಿತಿದ್ದರೂ ಸಾಲದು ಎನ್ನುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಇದರಿಂದ ಸಹಜವಾಗಿ ಎಲ್ಲೆಡೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಲೇಜಿನಿಂದ ಹೊರ ಬರುವಾಗ ಶಿಕ್ಷಣದ ಸರ್ಟಿಫಿಕೇಟ್ ಜತೆ ಇನ್ನೂ ಅನೇಕ ಕೌಶಲಗಳಿದ್ದರಷ್ಟೇ ಮಣೆ ಎನ್ನುವಂತಾಗಿದೆ. ಹೀಗಾಗಿ ವಿದ್ಯಾರ್ಥಿ ಜೀವನದಿಂದಲೇ ಸಾಧನೆಯತ್ತ ಮನಸ್ಸು ಮಾಡಬೇಕು. ಶಿಕ್ಷಣಕ್ಕೆ ತಕ್ಕ ಉದ್ಯೋಗ ದೊರೆಯದಿದ್ದರೂ ನಾನು ಬದುಕಬಲ್ಲೆ ಎನ್ನುವಂತಾಗಬೇಕು. ಇದು ನನ್ನಿಂದ ಸಾಧ್ಯವಿಲ್ಲ ಎನ್ನುವ ಮನಸ್ಥಿತಿ ಹೊಂದಿದ್ದರೆ ನಮ್ಮನ್ನು ಗುರುತಿಸಲು ಸಾಧ್ಯವಿಲ್ಲ. ಯಾವುದೇ ರಂಗವಿರಲಿ ದೃಢಚಿತ್ತದಿಂದ ಮುಂದುವರಿದರೆ ಸಾಧನೆಯ ಶಿಖರವೇರಬಹುದು. ನೆನಪಿಡಿ ಸಾಧಕರಿಗೆ ಯಶಸ್ಸು ಸುಲಭವಾಗಿ ಒಲಿದದ್ದಲ್ಲ. ಅವರೆಲ್ಲ ಅವಕಾಶಕ್ಕಾಗಿ ಕಾಯದೇ ತಾವೇ ಸೃಷ್ಟಿಸಿಕೊಂಡು ಮಾದರಿಯಾಗಿದ್ದಾರೆ.
ಸೈನಾ ನೆಹ್ವಾಲ್ ಸ್ಫೂರ್ತಿ
ಸಾಧನೆ ಶಿಖರ ಏರಿ ನಿಲ್ಲಬೇಕಾದರೆ ಕಠಿನ ಪರಿಶ್ರಮ, ಸೂಕ್ತ ತಯಾರಿ ಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ಸೈನಾ ನೆಹ್ವಾಲ್. ಪ್ರಪಂಚದ ಬ್ಯಾಡ್ಮಿಂಟನ್ ಪ್ರೇಮಿಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದವರಲ್ಲಿ ಸೈನಾ ನೆಹ್ವಾಲ್ ಕೂಡಾ ಒಬ್ಬರು. ನಂ. 1 ರ್‍ಯಾಂಕಿಂಗ್‌ನಲ್ಲಿ ಮಿಂಚಿದ್ದ ಈ ಪ್ರತಿಭೆ ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಕೊರಳೊಡ್ಡಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದರು. ಇಂತಹ ಯಶಸ್ಸು ಸುಮ್ಮನೆ ಬಂದಿಲ್ಲ. ಇದರ ಹಿಂದೆ ತ್ಯಾಗ ಇದೆ, ಪರಿಶ್ರಮ ಇದೆ, ಶ್ರದ್ಧೆ ಇದೆ, ನಾನೇನಾದರೂ ಸಾಧಿಸಬಲ್ಲೆ ಎನ್ನುವ ಛಲ ಇದೆ. ಬ್ಯಾಡ್ಮಿಂಟನ್‌ನತ್ತ ಆಕರ್ಷಿತಳಾಗಿದ್ದ ಪುಟ್ಟ ಸೈನಾ 8ನೇ ವರ್ಷದಲ್ಲಿ ತರಬೇತಿ ಪಡೆಯಲು ಆರಂಭಿಸಿದ್ದಳು. ಕ್ರೀಡಾಂಗಣ ಮನೆಯಿಂದ 20 ಕಿ.ಮೀ. ದೂರದಲ್ಲಿತ್ತು. ಮುಂಜಾನೆ ಬೇಗ ಎದ್ದು ಕೋಚಿಂಗ್ ಮುಗಿಸಿ ಮತ್ತೆ ಶಾಲೆಗೆ ಹೋಗಬೇಕಿತ್ತು. ಶಾಲೆ ಮುಗಿಸಿ ಮತ್ತೆ ಸಂಜೆಯೂ ಕೋಚಿಂಗ್. ಸೈನಾಳನ್ನು
ಕೋಚಿಂಗ್‌ಗೆ ಕರೆದುಕೊಂಡು ಹೋಗಲು ತಂದೆ ಹರ್ವಿರ್ ಸಿಂಗ್ ನೆಹ್ವಾಲ್ ಪ್ರತಿದಿನ 50 ಕಿ.ಮೀ. ಸ್ಕೂಟರ್ ಓಡಿಸಬೇಕಿತ್ತು. ಮುಂಜಾನೆ ಏಳುತ್ತಿದ್ದ ಬಾಲೆ ಸೈನಾ ಸ್ಕೂಟರ್ ಹಿಂದೆ ನಿದ್ದೆ ಹೋಗುತ್ತಿದ್ದಳು. ಅಪಾಯವನ್ನು ಗ್ರಹಿಸಿದ ತಾಯಿ ಉಷಾ ರಾಣಿ ನೆಹ್ವಾಲ್ ಕೂಡ ಜತೆಗೆ ಬರಲಾರಂಭಿಸಿದರು. ಹೀಗೆ ಸೈನಾಗೆ ಪಾಲಕರಿಂದಲೂ ಉತ್ತಮ ಬೆಂಬಲ ದೊರೆತಿತ್ತು. ಆಕೆಯೂ ಪಾರ್ಟಿ, ಸಿನೆಮಾ ತೊರೆದು ತಪಸ್ಸಿನಂತೆ ಅಭ್ಯಾಸ ಮಾಡಿದ್ದರಿಂದ ಯಶಸ್ಸು ಸಿಗುವಂತಾಯಿತು.
ಇದು ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಪರಿಶ್ರಮದ ಕಥೆ ಎಲ್ಲ ಯಶಸ್ಸಿನ ಹಿಂದೆಯೂ ಅಡಗಿದೆ. ಆದ್ದರಿಂದ ನಿಮ್ಮನ್ನು ನೀವು ಗುರುತಿಸಿಕೊಳ್ಳಲು ಕೆಲವು ತ್ಯಾಗಕ್ಕೆ ಸಿದ್ಧರಾಗಿ. ಇಂದು ಸ್ವಲ್ಪ ಕಷ್ಟಪಟ್ಟರೆ ಉಜ್ವಲ ಭವಿಷ್ಯ ನಿಮ್ಮದಾಗುವುದರಲ್ಲಿ ಸಂದೇಹವಿಲ್ಲ.
ಚಿರಾಗ್