ಕೊರಟಗೆರೆ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ ಮಹರ್ಷಿ ಭಗೀರಥರ ಪ್ರಯತ್ನ ಅನುಸರಿಸಿದರೆ ತಕ್ಕ ಫಲಿತಾಂಶ ಸಿಗಲಿದೆ. ಭಗೀರಥ ಪ್ರಯತ್ನಕ್ಕೆ ಅಷ್ಟೊಂದು ಮಹತ್ವವಿದೆ ಎಂದು ಶಿರಸ್ತೇದಾರ್ ಶ್ರೀರಂಗಯ್ಯ ತಿಳಿಸಿದರು. ಪಟ್ಟಣದ ತಾಲೂಕು ಕಚೆೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಭಗೀರಥ ಉಪ್ಪಾರ ಸಂಘ ಏರ್ಪಡಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಂಗೆ ಭೂಮಿಗೆ ಕರೆತಂದ ಮಹಾತ್ಮ: ಮಹರ್ಷಿ ಭಗೀರಥರು ಅನ್ನ, ಆಹಾರಗಳನ್ನು ತ್ಯಜಿಸಿ ಅವಿರತ ತಪಸ್ಸು ಮಾಡಿ, ಭೂಮಿಯನ್ನು ಪವಿತ್ರಗೊಳಿಸಲು ಎಷ್ಟೇ ಅಡೆ ತಡೆ ಎದುರಾದರೂ ಸಹ ಛಲಬಿಡದೇ ಗಂಗೆಯನ್ನು ಭೂಮಿಗೆ ಕರೆತಂದ ಮಹಾ ಪುರುಷರಾಗಿದ್ದಾರೆ ಎಂದು ತಿಳಿಸಿದರು.
ನೀರು ಸಂರಕ್ಷಿಸಿ: ಗಂಗೆ ಎಂದರೆ ನೀರು. ಮನುಷ್ಯನಿಗೆ ನೀರಿನ ಮಹತ್ವ, ಮೌಲ್ಯ ತಿಳಿದಿದ್ದರೂ ಇಂದು ನೀರು ಎಲ್ಲೆಡೆ ಕಲುಷಿತಗೊಳಿಸುತ್ತಿರುವುದು ದುರಂತವಾಗಿದೆ. ನೀರಿನ ಮಹತ್ವವನ್ನು ಎಲ್ಲರೂ ಮನಗಾಣಬೇಕು. ನೀರನ್ನು ಉಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ನಾಗಣ್ಣ ಮಾತನಾಡಿ, ಭಗೀರಥರ ಸಾಧನೆ, ಜೀವನ ಗಾಥೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಯಾವುದೇ ವ್ಯಕ್ತಿ ಗುರಿ ಮುಟ್ಟಲು ಸಾಧನೆ, ಭಗೀರಥನ ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು. ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ತಿಳಿಸಿದರು.
ನಿವೇಶನ ,.ಜೂರು ಮಾಡಿ: ತಾಲೂಕು ಉಪ್ಪಾರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಕಳೆದ 5 ವರ್ಷದ ಹಿಂದೆ ಸರ್ಕಾರದಿಂದ ನಿವೇಶನ ಕೋರಿ ಮನವಿ ಸಲ್ಲಿಸಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಪರಿಗಣಿಸಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಚನ್ನವೀರಯ್ಯ, ನಕುಲ್, ಚಿಕ್ಕರಾಜು, ರೇವಣ್ಣ, ಉಪ್ಪಾರ ಸಮುದಾಯದ ನಾಗರಾಜು, ಕೀರ್ತಿರಾಜು, ದಾದಾಪೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.