Advertisement

ಜಲಮರುಪೂರಣ, ಸ್ವಚ್ಛತೆಗೆ ಯಂತ್ರ ಅಳವಡಿಕೆಯ ಸಾಧನೆ 

04:41 PM Nov 02, 2017 | |

ಬಂಟ್ವಾಳ: ರಾಜ್ಯಾದ್ಯಂತ ಹಲವು ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಂಭೂರಿನ
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಹಲವು ಕಾರಣಗಳಿಗಾಗಿ ಮಾದರಿಯಾಗಿ ಕಂಡುಬರುತ್ತದೆ.

Advertisement

ಸ್ವಚ್ಛತೆಗೆ ತಂತ್ರಜ್ಞಾನ
ಈ ಶಾಲೆಯಲ್ಲಿ ಹೊಸ ತಂತ್ರಜ್ಞಾನದ ಸ್ವಚ್ಛತಾ ಯಂತ್ರಗಳನ್ನು ಅಳವಡಿಸಿ ಇಡೀ ಶಾಲೆಯ ಸ್ವಚ್ಛತೆಯನ್ನು ನಿರ್ವಹಿಸಲಾಗುತ್ತಿದೆ. ಈ ರೀತಿಯ ವ್ಯವಸ್ಥೆ ಹೊಂದಿರುವುದು ಜಿಲ್ಲೆಯಲ್ಲೇ ಪ್ರಥಮ. ಜತೆಗೆ, ಸರಕಾರದ ಬಿಸಿಯೂಟ ಯೋಜನೆ ಜಾರಿಗೊಳ್ಳುವ ಮೊದಲೇ ಶಾಲೆಯಲ್ಲಿ ಭೋಜನ ಸೌಲಭ್ಯ ಇತ್ತು. ಈಗ ಅಕ್ಷರ ದಾಸೋಹ ಯೋಜನೆಯಡಿ ಅನ್ನ ಬೇಯಿಸಲು ಸ್ಟೀಮ್‌ ಅಳವಡಿಸಲಾಗಿದೆ. ಅಡುಗೆಯವರು ಸ್ವಚ್ಛತೆ ಕಾಪಾಡಲು ಕೈಗಳಿಗೆ, ತಲೆಗೆ ಗವಸು ತೊಡುತ್ತಾರೆ.

ಇಂಟರ್ಕಾಮ್‌ ವ್ಯವಸ್ಥೆ!
ಶಾಲಾ ಕಂಪ್ಯೂಟರ್‌ ಕೊಠಡಿ ಖಾಸಗಿ ಶಾಲೆಗಳಂತೆ ಹವಾನಿಯಂತ್ರಿತವಾಗಿದೆ. ತರಗತಿ ಕೊಠಡಿಗೆ ಇಂಟರ್ಕಾಮ್‌ ವ್ಯವಸ್ಥೆ ಇದೆ. ಇಡೀ ಶಾಲೆಗೆ ಭದ್ರತಾ ದೃಷ್ಟಿಯಿಂದ ಸಿಸಿ ಕೆಮರಾ ಅಳವಡಿಸಲಾಗಿದೆ. ಸಭಾಂಗಣ, ಶೌಚಾಲಯವೆಲ್ಲದಕ್ಕೂ ಟೈಲ್ಸ್‌ ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಊಟಕ್ಕೆ ಉಚಿತ ತಟ್ಟೆ, ಲೋಟವಲ್ಲದೆ
ವಿಶಾಲ ಭೋಜನಶಾಲೆಯೂ ನಿರ್ಮಾಣಗೊಂಡಿದೆ. 

ಐಡಿ ಕಾರ್ಡ್‌, ಜಲಮರುಪೂರಣ ವ್ಯವಸ್ಥೆ
ಶಾಲಾ ಮಕ್ಕಳಿಗೆ ಐಡಿ ಕಾರ್ಡ್‌ ಇದೆ. ಜಲಮರುಪೂರಣ ವ್ಯವಸ್ಥೆಯನ್ನೂ ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ನೀರು ಪೋಲಾಗದೆ ಅದನ್ನು ಮರುಪೂರಣ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಜಲಪಾಠ, ಸ್ವಚ್ಛತಾ
ಪಾಠ ನಿತ್ಯವೂ ಸಿಗುತ್ತಿದೆ. ಶಾಲಾ ಮಕ್ಕಳೇ ಕೈತೋಟ ಮಾಡಿ ಸ್ವಾವಲಂಬಿ ಜೀವನಕ್ಕೆ ಮುಂದಡಿ ಇಟ್ಟಿದ್ದಾರೆ.

ದಾಖಲಾತಿಯೂ ಹೆಚ್ಚಳ
ಚಿತ್ರಕಲೆ, ಭರತನಾಟ್ಯ, ನಾಟಕ, ಯಕ್ಷಗಾನ ತರಬೇತಿಗಳನ್ನು ಮಕ್ಕಳಿಗೆ ಉಚಿತವಾಗಿ ಶಾಲಾಭಿವೃದ್ಧಿ ಸಮಿತಿ ನೀಡುತ್ತಾ ಪ್ರದರ್ಶನದ ಪ್ರಾಯೋಜಕತ್ವ ವಹಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಾಗಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಶಾಲೆ ಇದಾಗಿದೆ.

Advertisement

ವಿದ್ಯಾರ್ಥಿ ಸಾಧನೆಗಳು
2015-16ನೇ ಸಾಲಿನಲ್ಲಿ ಈ ಶಾಲಾ ನಾಟಕ ತಂಡವು ‘ವಿಜ್ಞಾನ ನಾಟಕ’ ಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ
ದ್ವಿತೀಯ ಸ್ಥಾನ ಗಳಿಸಿದೆ. ಎಂ.ಎಚ್‌. ಆರ್‌.ಡಿ. ವತಿಯಿಂದ ನಡೆದ ‘ಕಲಾ ಉತ್ಸವ’ದ ನಾಟಕ ಸ್ಪರ್ಧೆಯಲ್ಲಿ 10ನೆಯ
ತರಗತಿ ಕನ್ನಡ ಪಠ್ಯಾಧಾರಿತ ‘ಹಲಗಲಿಯ ಬೇಡರು’ ನಾಟಕ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಾಲಾ ತಂಡ ರಾಜ್ಯ ಮಟ್ಟದಲ್ಲಿ ನಾಟಕ ಪ್ರದರ್ಶನ ನೀಡಲು ಸಜ್ಜಾಗಿದೆ.

2003-04ರಲ್ಲಿ ಆರಂಭವಾದ ಶಾಲೆ
ಗ್ರಾಮಾಂತರ ಪ್ರದೇಶದ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಶೋಚನೀಯ ಸ್ಥಿತಿಯಲ್ಲಿದ್ದ ಕಾಲ ಘಟ್ಟದಲ್ಲಿ (2003-04) ಸ್ಥಳೀಯ ರಾಜಕಾರಣಿ ಬೊಂಡಾಲ ಜಗನ್ನಾಥ ಶೆಟ್ಟಿ ಅವರು ಇಲಾಖೆಯ ಅನುಮತಿ ಪಡೆದು ಈ ಶಾಲೆ ಆರಂಭಿಸಿದ್ದರು. ಇದಕ್ಕೆ ಸರಕಾರದ ವಿವಿಧ ಅನುದಾನಗಳೂ ಲಭಿಸಿದವು. ಅವರ ಕಾಲಾನಂತರ ಅವರ ಹಿರಿಯ ಸಹೋದರ ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಶಾಲಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆಂಗ್ಲ ಮಾಧ್ಯಮ ವಿಭಾಗವೂ ಇದೆ
2015-16ನೆಯ ಸಾಲಿನಲ್ಲಿ 8ನೆಯ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗವನ್ನು ಹೆತ್ತವರ ಬೇಡಿಕೆಯಂತೆ ಆರಂಭಿಸಲಾಗಿದೆ. 2016-17ನೇ ಸಾಲಿನಲ್ಲಿ 8ನೆಯ ತರಗತಿಗೆ ಒಟ್ಟು 79 ವಿದ್ಯಾರ್ಥಿಗಳು ದಾಖಲಾಗಿದ್ದು,
ಶಾಲೆಯ ಒಟ್ಟು ದಾಖಲಾತಿ 228 ಆಗಿದೆ. (118 ವಿದ್ಯಾರ್ಥಿಗಳು, 110 ವಿದ್ಯಾರ್ಥಿನಿಯರು)

ಭವಿಷ್ಯದ ಯೋಜನೆ
ಶಾಲೆಯನ್ನು ದತ್ತು ತೆಗೆದುಕೊಂಡ ಬಳಿಕ ಹಲವು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಇದಕ್ಕೆ ಎಲ್ಲರ ಪ್ರೋತ್ಸಾಹ ಇದೆ. ಸತ್ಯಸಾಯಿ ಸೇವಾ ಟ್ರಸ್ಟ್‌ ನಿಂದ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಾಹಾರವನ್ನು ನ. 7ರಿಂದ ಒದಗಿಸುವ ಆಲೋಚನೆಯಿದೆ. ವಿದ್ಯುತ್‌ ವಿಚಾರದಲ್ಲೂ ಸ್ವಾವಲಂಬಿಯಾಗಲು ಶಾಲೆಯಲ್ಲಿ ಸೋಲಾರ್‌ ಅಳವಡಿಸುವ ಆಲೋಚನೆ ಇದೆ. ಪ್ರತಿ ವರ್ಷ 10 ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗುತ್ತದೆ. ಇದರೊಂದಿಗೆ ಆಂಗ್ಲ ಭಾಷಾ ಹೆಚ್ಚುವರಿ ಶಿಕ್ಷಕಿಯ ವೇತನವನ್ನು ಸ್ವಂತ ನೆಲೆಯಲ್ಲಿ ನೀಡುತ್ತಿದ್ದೇನೆ.

ಬೊಂಡಾಲ ಸಚ್ಚಿದಾನಂದ ಶೆಟ್ಟಿ,
 ಅಧ್ಯಕ್ಷರು, ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next