Advertisement

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

06:31 PM Jan 21, 2022 | Team Udayavani |

ರಾಮದುರ್ಗ: ದ್ವೇಷ, ಅಸೂಯೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸತ್ಕಾರ್ಯಗಳಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಅದನ್ನೇ ಬಸವಾದಿ ಶರಣರು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಖಜೂರಿ ಕೋರಣೇಶ್ವರ ಮಠದ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಹೇಳಿದರು.

Advertisement

ಚಿಕ್ಕತಡಸಿ, ಹಿರೇತಡಸಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪ್ರಯುಕ್ತ ಏರ್ಪಡಿಸಿದ್ದ ಬಸವ ಧರ್ಮದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಅಂದು ಸಮಾಜದಲ್ಲಿರುವ ಜಾತಿ ಪದ್ಧತಿ, ಮಹಿಳೆಯರ ಮೇಲಿರುವ ಕಟ್ಟಳೆ ಹೋಗಲಾಡಿಸಲು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಜಗತ್ತು ತಿಳಿಯಲೆಂದು ಒಳ್ಳೆಯ ಕೆಲಸ ಮಾಡಬಾರದು. ನಮ್ಮ ಕೆಲಸ ನೋಡಿ ಜಗತ್ತು ಗುರುತಿಸುವಂತಾಗಬೇಕು. ಅಂತಹ ಸಾಧನೆ ಮಾಡಿದ ಫಲಹಾರ ಶಿವಯೋಗಿಗಳ ತತ್ವಾದರ್ಶ ಅರಿತುಕೊಳ್ಳಬೇಕು. ವಚನ ಸಾಹಿತ್ಯ ಓದಿ, ಗುರು, ಲಿಂಗ, ಜಂಗಮ ಪ್ರೇಮಿಯಾದಾಗ ಮಾತ್ರ ಸಾರ್ಥಕ ಬದುಕು ಸಾಧ್ಯ ಎಂದರು.

ನಿರಂಜನಮೂರ್ತಿ ನೀಲಲೋಚನ ತಾಯಿ ಮಾತನಾಡಿ, ಗುರು ಮಾರ್ಗದರ್ಶ ನದಲ್ಲಿ ಅಂದುಕೊಂಡ ಸಾಧನೆ ಮಾಡಲು ಸಾಧ್ಯ. ಮುರುಘೇಂದ್ರ ಕೋರಣೇಶ್ವರ
ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಭಕ್ತರು ನಡೆಯಬೇಕು. ಬಸವಣ್ಣನವರು ತಿಳಿಸಿದಂತೆ ಕಾಯಕದಲ್ಲಿಯೇ ಪರಮಾತ್ಮನನ್ನು ಕಂಡಾಗಲೇ ಬದುಕಿಗೊಂದು ಅರ್ಥ ಬರುತ್ತದೆ ಎಂದರು.

ಹೊಸಕೇರಿ ಫಲಹಾರೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಶಂಕರ ಅಂಗಡಿ ಮಾತನಾಡಿ, ಮಾನವನ ಅಹಂಕಾರ, ದುಶ್ಚಟ ಹೋಗಲಾಡಿಸಲು ಧರ್ಮೋಪದೇಶ ಅಗತ್ಯ. ಹೊಸಕೇರಿಯಲ್ಲಿ ಸ್ಥಾಪನೆಯಾಗಿರುವ ಫಲಹಾರೇಶ್ವರ ತಪೋಭೂಮಿ, ಬಸವ ಭವನದಲ್ಲಿ ನಿತ್ಯ ಧಾರ್ಮಿಕ ಕಾರ್ಯಗಳು ನಡೆಯಬೇಕಾದಲ್ಲಿ ಗುರು ಮಾರ್ಗದರ್ಶನ ಹಾಗೂ ಭಕ್ತರ ಸಹಕಾರ ಅಗತ್ಯ ಎಂದರು.

Advertisement

ಗೌಡಪ್ಪಗೌಡ ಪಾಟೀಲ ಮಾತನಾಡಿದರು. ಈ ವೇಳೆ ಹೊಸಕೇರಿ ಗ್ರಾಪಂ ಅಧ್ಯಕ್ಷ ರಮೇಶ ಹೊಳೆಯನ್ನವರ, ಸದಸ್ಯರಾದ ಶೆಟ್ಟೆಪ್ಪ ಶಿಪ್ರದವರ, ಯಲ್ಲಪ್ಪ ತಳವಾರ, ಕಲ್ಲನಗೌಡ ಪಾಟೀಲ, ಪಂಚಪ್ಪ ಹಳ್ಳಿ, ಶಿವನಗೌಡ ಪಾಟೀಲ, ಮಂಜುನಾಥ ಹಳ್ಳಿ, ಹೊಳಬಸಪ್ಪ ಹರನಟ್ಟಿ, ಈರಣ್ಣ ಹರನಟ್ಟಿ, ಶಿಕ್ಷಕರಾದ ಆರ್‌.ವಿ. ಅಪ್ಪಾಜಿಗೌಡ್ರ, ಆರ್‌.ಎನ್‌. ಕಂಠಿ, ಬಸನಗೌಡ ಪಾಟೀಲ, ಶೇಖರಗೌಡ ಪಾಟೀಲ, ಮಾರುತಿ ಉಪ್ಪಾರ, ಮಹೇಶ ಜಾಧವ, ಮಂಜುನಾಥ ಜಾಧವ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next