Advertisement

ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ನಿಂದ ಸಾಧನಾ ಸಮಾವೇಶ

03:02 PM Jan 11, 2018 | |

ಬೇಲೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಸಾಧನಾ ಸಮಾವೇಶ ಮಾಡಿ ಜನರ ತೆರಿಗೆಯನ್ನು ವೆಚ್ಚ ಮಾಡುತ್ತಿದೆ. ಅಲ್ಲದೇ, ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ದುರಹಂಕಾರದ ಮಾತುಗಳನ್ನು ಕಾಂಗ್ರೆಸ್‌ ನಾಯಕರು ಆಡುತ್ತಿದ್ದಾರೆಂದು ಮಾಜಿ ಪ್ರಧಾನಿ
ಎಚ್‌.ಡಿ.ದೇವೇಗೌಡ ತೀವ್ರ ವಾಗ್ಧಾಳಿ ನಡೆಸಿದರು.

Advertisement

ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಪ್ರವಾಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 4.5 ವರ್ಷಗಳಿಂದ ಯಾವುದೇ ಸಾಧನೆ ಮಾಡಿಲ್ಲ. ಚುನಾವಣೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಪ್ರಚಾರಕ್ಕೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ಜನರು ಅರಿಯಬೇಕು ಎಂದರು.

ಸಿಎಂ ದುರಹಂಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ಪಕ್ಷವನ್ನು ಮುಗಿಸುವ ದುರಹಂಕಾರದ ಮಾತನಾಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬಂದು ನಾನೇ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದಾರೆ. ದೇವೇಗೌಡರು ಇಳಿ ವಯಸ್ಸಿನಲ್ಲೂ ರಾಜ್ಯ ಸುತ್ತಾಡಿ ಮಗನನ್ನು ಮುಖ್ಯಮಂತ್ರಿ ಮಾಡಲು ಹೋರಾಡುತ್ತಿದ್ದಾರೆಂದು ಟೀಕಿಸುತ್ತಾರೆ. ಆದರೆ, ತಮ್ಮ ಮಗ ಸಾವನ್ನಪ್ಪಿದ 8 ದಿನಗಳಲ್ಲಿ ಮತ್ತೂಬ್ಬ ಮಗನನ್ನು ತಮ್ಮ ಕ್ಷೇತ್ರದ ಉಸ್ತುವಾರಿ ನೋಡಲು ನೇಮಕ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನ ಹಣ, ಅಧಿಕಾರದ ದರ್ಪವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜೆಡಿಎಸ್‌ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾಂಗೀಯ ಘರ್ಷಣೆ ನಡೆದು
ಸುಮಾರು 20 ಅಮಾಯಕರು ಸಾವಿಗೀಡಾಗಿದ್ದಾರೆ. ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದೀರಿ. ಇದೇ ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು.

ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಎಚ್‌. ವಿಶ್ವನಾಥ್‌ ಅಂಥವರು ಸೇರಿ ಸೋನಿಯಾ ಗಾಂಧಿ ಬಳಿ ಹೋಗಿ ಅಂಗಲಾಚಿದರು. ನೀವು ಇದನ್ನು ಮರೆತಿರಬಹುದು. ನೆನಪು ಮಾಡಿಕೊಳ್ಳುವ ಕಾಲ ದೂರವಿಲ್ಲ ಎಂದರು.

Advertisement

ಕಾಂಗ್ರೆಸ್‌ ಅನಿವಾರ್ಯವಲ್ಲ: ನಾನು ವಿರೋಧ ಪಕ್ಷದಲ್ಲಿದ್ದಾಗ ನನ್ನನ್ನು ಮುಖ್ಯಮಂತ್ರಿ ಮಾಡಲು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ನಮ್ಮ ಮನೆ ಬಾಗಿಲಿಗೆ ಕಾಂಗ್ರೆಸ್‌ ನಾಯಕರನ್ನು ಕಳುಹಿಸಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ನಿಮಗೆ ಅನಿವಾರ್ಯ ವಾಗಿರಬಹುದು ಹೊರತು ನನಗಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಛೇಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಹೋಗಿ ರಾಜ್ಯದಲ್ಲಿ ಬರಗಾಲವಿದ್ದು, ರೈತರ ಸಾಲ ಮನ್ನಾದ ಬಗ್ಗೆ ಅಂಗಲಾಚಿ ಎಂದರೆ ಇದಕ್ಕೆ ಕಿವಿ ಗೊಡಲಿಲ್ಲ ಇದು ಬಿಜೆಪಿ ಧೋರಣೆ ಎಂದು ಟೀಕಿಸಿದರು. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಂತ್ರಗಾರಿಕೆ ಹೆಣೆಯಲು ಚಾಣಾಕ್ಷರಾದ ಪ್ರಧಾನಿ ಮೋದಿ, ಅಮಿತ್‌ ಷಾ ರಾಜ್ಯಕ್ಕೆ ಆಗಮಿಸುವರು. ಅವರಿಗೆ ತಕ್ಕ ಉತ್ತರ ನೀಡಲು ಜೆಡಿಎಸ್‌ ಪಕ್ಷವು ಸಹ ಸಿದ್ಧವಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಸ್ವಂತ ಬಲದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾ, ರತ್ನಮ್ಮ, ಲತಾ ಮಂಜೇಶ್ವರಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್‌, ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸತೀಶ್‌, ಉಪಾಧ್ಯಕ್ಷ ಎಂ.ಎ.ನಾಗರಾಜು, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌, ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಮುಖಂಡರಾದ
ಬಿ.ಸಿ.ಮಂಜುನಾಥ್‌, ಬಿ.ಡಿ.ಚಂದ್ರೇಗೌಡ, ರಾಜಶೇಖರ್‌ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next