ಔರಾದ: ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನತೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.
ಪಟ್ಟಣದ ಸಣ್ಣ ನಿರಾವರಿ ಇಲಾಖೆ ಕಚೇರಿ ಆವರಣದಲ್ಲಿ ಜೆಡಿಎಸ್ ತಾಲೂಕು ಘಟಕದಿಂದ ಆಯೋಜಿಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತಾಡಿದರು. ಸಾಲದ ಸುಳಿಯಲ್ಲಿ ಸಿಲುಕಿ ನಾಡಿನ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಸಂಪೂರ್ಣ ಸಾಲಮನ್ನಾ ಮಾಡದೇ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಅಲ್ಪ ಪ್ರಮಾಣದ ಸಾಲ ಮನ್ನಾ ಮಾಡಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಮಾತನಾಡಿ, ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಮತಗಳನ್ನು ಪಡೆದು ಅಧಿ ಕಾರಕ್ಕೆ ಬಂದ ತಕ್ಷಣ ಅವರನ್ನು ಮರೆತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಜನರ ಕಲ್ಯಾಣಕ್ಕಾಗಿ ಭಾರತದ ಸಂವಿಧಾನ ರಚಿಸಲಾಗಿದೆ. ಅದನ್ನು ತಿದ್ದುಪಡಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹಗಲು ಕನಸು ಕಾಣದೇ ಜನರಿಗೆ ಉತ್ತಮ ಆಡಳಿತ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವೆ ಶಿವಕಾಂತಾ ಚತುರೆ ಮಾತನಾಡಿ, 10 ವರ್ಷಗಳಿಂದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಜನರಿಂದ ಆಯ್ಕೆಯಾಗಿದ್ದರೂ ತಾಲೂಕಿನಲ್ಲಿ ಉತ್ತಮ ಕೆಲಸಗಳು ನಡೆದಿಲ್ಲ. ಬೀದರ-ಔರಾದ 40 ಕಿ.ಮೀ. ರಸ್ತೆಗೆಯಲ್ಲಿ 2ಗಂಟೆ ಸಂಚರಿಸುವ ಅನಿವಾರ್ಯತೆ ಬಂದಿದೆ. ಸಂಸದರು ತಾಲೂಕಿನ ನಿವಾಸಿಯಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವುದು ಇಬ್ಬರು ಬಿಜೆಪಿ ನಾಯಕರ ಅಭಿವೃದ್ಧಿ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಎಂದರು.
ಮುಖಂಡ ಶೇಷಪ್ಪ ಬಿರಾದ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ, ತಾಲೂಕು ಅಧ್ಯಕ್ಷ ತಾನಾಜಿ ತೋರಣೆಕರ್, ಯುವ ಮುಖಂಡ ವಿಶ್ವನಾಥ, ಜಿಪಂ ಮಾಜಿ ಅಧ್ಯಕ್ಷ ನಸಿಮೂದ್ದಿನ್ ಪಟೇಲ್, ಸುಂದರಾಜ ಕೇಸರಿ, ಅಶೋಕ ಕರಂಜೆ ಇನ್ನಿತರರು ವೇದಿಕೆಯಲ್ಲಿ ಇದ್ದರು.