Advertisement

ಆಚಾರ್ಯರ ಸಹಜ ಶೈಲಿಯ ಕಲಾಕೃತಿಗಳು 

06:51 PM Apr 20, 2018 | |

ದೇವಾನುದೇವತೆಗಳನ್ನು, ಪೌರಾಣಿಕ ಕಥಾ ಚಿತ್ರಗಳನ್ನು ಮತ್ತು ಭಾವಚಿತ್ರಗಳನ್ನು ಸಹಜ ಶೈಲಿಗಳಲ್ಲಿ ರಚಿಸಿ ಕ್ಯಾಲೆಂಡರ್‌ ರೂಪದಲ್ಲಿ ಭಾರತೀಯರ ಮನೆಗಳ ಗೋಡೆಯಲ್ಲಿ ರಾರಾಜಿಸುವಂತೆ ಮಾಡಿದವರು ಕೇರಳದ ತಿರುವಾಂಕೂರು ರಾಜ ಮನೆತನದ ಕಲಾವಿದ ರಾಜಾ ರವಿವರ್ಮ. ಅನಂತರದ ದಿನಗಳಲ್ಲಿ ಗುಲ್ಬರ್ಗದ ಎಸ್‌. ಎಂ. ಪಂಡಿತ್‌, ಬಿ.ಕೆ.ಎಸ್‌. ವರ್ಮಾ ಮತ್ತು ಅನೇಕ ಕಲಾವಿದರು ಈ ಪ್ರಯತ್ನ ಮಾಡಿದ್ದಾರೆ. ಈಗ ಮನೆಯ ಗೋಡೆಗಳಿಂದಲೂ, ಮನದ ಗೋಡೆಗಳಿಂದಲೂ ಇಂತಹ ಚಿತ್ರಗಳು ಮರೆಯಾಗಿವೆ. 

Advertisement

ಬ್ರಿಟಿಷರ ಸಂಸ್ಕೃತಿಯ ಪ್ರಭಾವದಿಂದ ಈ ಸಹಜ ಶೈಲಿಯು ರವಿವರ್ಮನೊಂದಿಗೆ ನಮ್ಮಲ್ಲಿ ರೂಢಿಗೆ ಬಂತು. ಭಾರತೀಯ ಚಿತ್ರ ರಚನಾ ಪದ್ಧತಿ ಮತ್ತು ಶೈಲಿ ಇದಕ್ಕಿಂತ ಭಿನ್ನವಾದರೂ ಸಹಜ ಶೈಲಿಯೂ ನಮ್ಮವೇ ಆಗಿ ಹೋಗಿದೆ. ಇಂತಹ ಕಲಾಕೃತಿಗಳನ್ನು ಇಂದು ದೇವಾಲಯದ ಗೋಡೆಗಳಲ್ಲಿ ಮಾತ್ರ ಕಾಣಬಹುದಾದರೂ ಇವುಗಳು ಡಿಜಿಟಲ್‌ ತಂತ್ರಜ್ಞಾನದ ಪ್ರತಿಗಳು. ಈ ಶೈಲಿಯ ಕಲಾಕೃತಿಗಳ ಪ್ರದರ್ಶನಗಳು ಕಾಣಸಿಗುವುದು ವಿರಳ. ಸಹಜ ಶೈಲಿಗಳ ರಚನೆಗೆ ಖ್ಯಾತರಾದ ಉಡುಪಿಯ ಕಲಾವಿದ ದಾಮೋದರ. ಎಲ್‌. ಆಚಾರ್ಯ ಅವರು ಉಡುಪಿಯ ರಾಮಕೃಷ್ಣ ಹೋಟೆಲ್‌ನ ಸಂಕೀರ್ಣದಲ್ಲಿ “ಶರನ್‌ ಆರ್ಟ್‌ ಗ್ಯಾಲರಿ’ಯನ್ನು ಆರಂಭಿಸಿ ಪ್ರಥಮವಾಗಿ ತನ್ನ ಆಯ್ದ ಸಹಜ ಶೈಲಿಯ ಕಲಾಕೃತಿಗಳ ಜೊತೆಗೆ ಇತರ ಶೈಲಿಯ ಪ್ರದರ್ಶನವನ್ನು ಏರ್ಪಡಿಸಿದ್ದರು.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಲಾಕೃತಿಗಳಿದ್ದಿದ್ದು, ಅದರಲ್ಲಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾದವರ ಭಾವಚಿತ್ರಗಳು ಭಾವಾಭಿವ್ಯಕ್ತಿಯೊಂದಿಗೆ ಜೀವಂತಿಕೆ ತುಂಬಿಕೊಂಡಿದ್ದವು. ಯಕ್ಷಗಾನ , ಕಥಕ್ಕಳಿ , ಭರತನಾಟ್ಯ , ಭೂತಕೋಲ , ಮಣಿಪುರಿ ನೃತ್ಯ , ಹುಲಿಯ ಗಾಂಭೀರ್ಯ ಮುಂತಾದ ಕೃತಿಗಳಲ್ಲಿನ ನೆರಳು- ಬೆಳಕು,ಸೂಕ್ಷ್ಮ ವಿಷಯ ಮತ್ತು ವರ್ಣ ಛಾಯೆಗಳು ಛಾಯಾಚಿತ್ರಗಳಷ್ಟೇ ಸ್ಪುಟವಾಗಿ ಮೂಡಿ ಬಂದಿತ್ತು. ಸೂಕ್ಷ್ಮ ಕಲೆಯಾದ ಮಿನಿಯೇಚರ್‌ ಚಿತ್ರಗಳನ್ನು ರಚಿಸುವಲ್ಲಿಯೂ ಹಿಡಿತವನ್ನು ಹೊಂದಿರುವ ಆಚಾರ್ಯರು ಈ ಕೃತಿಗಳಲ್ಲಿ ಕೃಷ್ಣನ ಬಾಲ್ಯ ಲೀಲೆಗಳನ್ನು ಅನಾವರಣಗೊಳಿಸಿದ್ದರು. ಅರೆ ಅಮೂರ್ತ ಶೈಲಿಯ ತಾಯಿ ಮಮತೆ, ರಾಧೆಯ ವಿರಹ, ನಾಗಾರಾಧನೆ, ಮೀನುಗಾರ ಮಹಿಳೆಯರು ಮುಂತಾದುವುಗಳಲ್ಲಿ ಆಚಾರ್ಯರ ಸೃಜನಶೀಲತೆ ಎದ್ದು ಕಾಣುತ್ತಿತ್ತು. ಪ್ರೋ ತಂತ್ರದಲ್ಲಿ ಮೂಡಿಬಂದ ವರ್ಣ ಜಲಪಾತ ಕೃತಿಯಲ್ಲಿನ ಇವರ ಜಾಣ್ಮೆ ಮೆಚ್ಚುವಂತಹುದು. ಉತ್ತಮ ಚೌಕಟ್ಟು ಹೊಂದಿದ ಹಾಗೂ ತೈಲ ವರ್ಣ, ಆಕ್ರಲಿಕ್‌ ಮತ್ತು ಜಲವರ್ಣ ಮಾಧ್ಯಮದ ಈ ಕೃತಿಗಳು ಆಚಾರ್ಯರಲ್ಲಿರುವ ಅಪಾರ ತಾಳ್ಮೆ, ನೆರಳು- ಬೆಳಕಿನ ಸಂಯೋಜನೆಯ ಜೊತೆಗೆ ಸಹಜತೆಗೆ ಹೊಂದಿಕೆಯಾಗುವ ವರ್ಣಗಳ ಮಿಶ್ರಣದಲ್ಲಿ ಅವರಿಗಿರುವ ಹಿಡಿತವನ್ನು ಎತ್ತಿ ತೋರಿಸುತ್ತಿತ್ತು. ಎರಡು ದಿನ ಕಲಾಪ್ರೇಮಿಗಳನ್ನೂ, ಜನಸಾಮಾನ್ಯರನ್ನೂ ಸೆಳೆಯುವಲ್ಲಿ ಈ ಕಲಾಪ್ರದರ್ಶನ ಯಶಸ್ವಿಯಾಯಿತು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next