ಉಡುಪಿ: ಪಾಕಿಸ್ತಾನದ ಉಗ್ರನೊಬ್ಬ ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಬಂದಿರುವ ಶಂಕೆ ಇದೆ ಎಂಬ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆ, ಕರಾವಳಿ ಕಾವಲುಪಡೆಗೆ ನೀಡಲಾಗಿದೆ.
ಪಾಕ್ ಮತ್ತು ಶ್ರೀಲಂಕಾದ ಒಟ್ಟು ಮೂವರು ತಮಿಳುನಾಡಿಗೆ ಬಂದಿರುವ ಬಗ್ಗೆ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಈ ಮೊದಲು ನೀಡಿತ್ತು. ಅದರಲ್ಲಿ ಓರ್ವ ಉಡುಪಿಯ ಮಲ್ಪೆ ತೀರದತ್ತ ಬಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಇವರು ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಮಲ್ಪೆ ಕಡಲ ತೀರದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.
ನಿರ್ದಿಷ್ಟ ಮಾಹಿತಿ ನಿನ್ನೆ ರಾತ್ರಿ ಬಂದಿತ್ತು. ಮಲ್ಪೆ ಕಡೆಗೆ ಬಂದಿದ್ದಾರೆ ಎಂಬ ಖಚಿತತೆ ಇಲ್ಲ. ತಮಿಳುನಾಡಿಗೆ ಬಂದಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಇದೆ. ಎಚ್ಚರಿಕೆ ಮಲ್ಪೆಗೆ ಮಾತ್ರ ಸೀಮಿತವಲ್ಲ. ಇಡೀ ಕರ್ನಾಟಕ ಕರಾವಳಿಗೆ. ಮಲ್ಪೆ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಮುಂದುವರೆಸಿದ್ದೇವೆ ಎಂದು ಉಡುಪಿ ಎಸ್ಪಿ ನಿಶಾ ಜೇಮ್ಸ್ ಹೇಳಿಕೆ ನೀಡಿದ್ದಾರೆ.