ಮಂಗಳೂರು: ನಗರದ ವಿ.ಟಿ. ರಸ್ತೆಯ ಚಿನ್ನದ ಅಂಗಡಿಗೆ 1996ರಲ್ಲಿ ಕನ್ನ ಹಾಕಿದ್ದ ಕೇರಳದ ಕಣ್ಣೂರು ಜಿಲ್ಲೆ ಯಡಕಾಡು ಗ್ರಾಮದ ತೋಟದ ಕಾಲನಿ ನಿವಾಸಿ ಮಣಿ ಯಾನೆ ತೋಟದ ಮಣಿ ಎಂಬವನನ್ನು ನ್ಯಾಯಲಯ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.
ಪ್ರಕರಣದ ವಿವರ:
1996ರ ಜುಲೈ 25ರಂದು ವಿ.ಟಿ.ರಸ್ತೆಯ ಲಕ್ಷ್ಮಿ ಬಿಲ್ಡಿಂಗ್‌ನಲ್ಲಿದ್ದ ಎಸ್.ಪುರಂದರ ಶೇಟ್ ಎಂಬುವರ ಚಿನ್ನದ ಅಂಗಡಿಗೆ ಆರೋಪಿ ಮಣಿ ಕನ್ನ ಹಾಕಿ 4,700 ರೂ. ಮೌಲ್ಯದ ಚಿನ್ನದ ಚೂರು (ಆಗಿನ ಬೆಲೆ), ಹವಳ, ಮಣಿ ಇತ್ಯಾದಿಗಳನ್ನು ಕಳವು ಮಾಡಿದ್ದ. ಆಗ ಮಂಗಳೂರು ಉತ್ತರ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದ ಕೆ.ಟಿ.ಶೆಣೈ ಅವರು ಸಿಬಂದಿಯೊಂದಿಗೆ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಿಜೆಎಂ ಎರಡನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಭಾಗವತ್ ಅವರು ಅ.19ರಂದು ಆರೋಪಿಯನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಾರೆ.
ಆರೋಪಿ ಪರವಾಗಿ ನ್ಯಾಯವಾದಿ ತಲೆಕಾನ ರಾಧಾಕೃಷ್ಣ ಶೆಟ್ಟಿ ವಾದ ಮಂಡಿಸಿದ್ದರು.