ಜಮಖಂಡಿ: ಶಿಕ್ಷಣ ಇಲಾಖೆ ಅಧಿಕಾರಿಗಳು ಪತ್ರಕರ್ತರ ಹೆಸರು ದುರ್ಬಳಕೆ ಮಾಡಿಕೊಂಡು ಕೋಚಿಂಗ್ ಕ್ಲಾಸ್ ಮಾಲಿಕರಿಂದ ಲಕ್ಷಾಂತರ ಹಣ ವಸೂಲಿ ಮಾಡಿದ್ದನ್ನು ಖಂಡಿಸಿದ ಪತ್ರಕರ್ತರು, ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿ, ತಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿದರು.
ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಳೆದ ತಾಪಂ ಸಾಮಾನ್ಯ ಸಭೆಯ ಠರಾವು ಪತ್ರದಲ್ಲಿ ಶಿಕ್ಷಣ ಕೋಚಿಂಗ್ ಸೆಂಟರ್‌ಗಳಿಂದ ಹಣ ವಸೂಲಿ ಮಾಡಿರುವ ಕುರಿತು ಪತ್ರಕರ್ತರು ಚರ್ಚೆ ಮಾಡಿದ್ದು, ನಿಯಮಾನುಸಾರ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ನಡಾವಳಿ ರವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಳೆದ ಸಭೆಯ ಠರಾವು ಪ್ರತಿಯನ್ನು ಪತ್ರಕರ್ತರು ಪ್ರಶ್ನಿಸಿ, ಸಭೆಯಲ್ಲಿ ನಮಗೆ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಇದೆಯಾ? ಮುಂದಿನ ಸಭೆಯಲ್ಲೂ ಸಮಸ್ಯೆಗಳಿಗೆ ಚರ್ಚಿಸಲು ಪತ್ರಕರ್ತರಿಗೆ ಅವಕಾಶ ನೀಡಬೇಕು ಎಂದು ತಾಪಂ ಇಒಅಶೋಕ ತೇಲಿ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಪಂ ಇಒ ಅಶೋಕ ತೇಲಿ ಮಾತನಾಡಿ, ನಾನು ಕಳೆದ ಸಭೆ ಠರಾವು ಪ್ರತಿ ನೋಡಿಲ್ಲ, ಮುಂದಿನ ಬಾರಿ ಈ ರೀತಿಯಾಗದಂತೆ ನಾನು ನೋಡಿಕೊಳ್ಳುವೆ. ಹಿಂದಿನ ಸಭೆಯಲ್ಲಿ ಠರಾವು ಮಾಡಿದಂತೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪತ್ರಕರ್ತರು ತಾಪಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸುತಿದ್ದರೂ ಶಾಸಕ ಸಿದ್ದು ಸವದಿ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ನಂತರ ಹಿಂದಿನ ಸಭೆಯಲ್ಲಿ ನಡೆದ ಘಟನೆ ಬಗ್ಗೆ ಪತ್ರಕರ್ತರು ಶಾಸಕರಿಗೆ ವಿವರಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ| ಶ್ರೀಶೈಲ ಹಟ್ಟಿ, ಸಭೆಗೆ ಪ್ರಗತಿ ವರದಿಯನ್ನು ಸಭೆಯಲ್ಲಿನ ಸದಸ್ಯರಿಗೆ ನೀಡಿದ್ದರು. ಆದರೆ ತಾಪಂ ಸಿಬ್ಬಂದಿ ಆ ವರದಿಯನ್ನು ಪುಸ್ತಕದ ಹಿಂದಿನ ಬದಿಯಲ್ಲಿ ಅಂಟಿಸಿದ್ದರು. ಉಪವಿಭಾಗ ಆಸ್ಪತ್ರೆಯ ಸಂಖ್ಯೆಗೆ ಅಧಿಕಾರಿ ಹೇಳಿದ ಅಂಕಿ ಸಂಖ್ಯೆಗೆ ತಾಳೆಯಾಗುತ್ತಿರಲಿಲ್ಲ. ಇದಕ್ಕೆ ಸ್ವಲ್ಪ ಗೊಂದಲಕ್ಕೀಡಾದ ತಾಪಂ ಸದಸ್ಯ ಶ್ರೀಮಂತ ಚೌರಿ ಪ್ರಗತಿ ವರದಿಯನ್ನು ಹರಿದು ಬಿಸಾಡಿದರು.
ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿಲ್ಲ, ನೀರಿನ ವ್ಯವಸ್ಥೆ ಮಾಡಲು ಸದಸ್ಯ ಭೀಮಸಿ ಹಾದಿಮನಿ ಸಭೆಯಲ್ಲಿ ಗಮನ ಸೆಳೆದರು.
ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ, ಸ್ಥಾಯಿ ಸಮಿತಿ ಚೇರಮನ್ ಗುರುಪಾದಯ್ಯ ಮರಡಿಮಠ, ತಾಪಂ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ತಾಪಂ ಇಒ ಅಶೋಕ ತೇಲಿ ಇದ್ದರು.