ಬೆಂಗಳೂರು: ಇತ್ತೀಚೆಗೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಆನಂದ್‌ನನ್ನು ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆಗೈದಿದ್ದ 11 ಮಂದಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಉಮೇಶ್ ಅಲಿಯಾಸ್ ಮಿಕಾ, ನಾಗೇಶ್ ಅಲಿಯಾಸ್ ನಾಗ, ವಿನಯ್, ಚಂದನ್, ನಾಗರಾಜು, ನವೀನ್ ಕುಮಾರ್, ಮೊಹಿತ್ ಅಲಿಯಾಸ್ ಜಾಕಿ, ಗಿರೀಶ್, ಕುಮಾರ್, ಮಂಜುನಾಥ, ನಾಗ ಬಂಧಿತರು. ಆರೋಪಿಗಳೆಲ್ಲರೂ ಶಿವಪುರ, ನೆಲಗೆದರನಹಳ್ಳಿ ನಿವಾಸಿಗಳಾಗಿದ್ದು, 28 ವರ್ಷದ ವಯಸ್ಸಿನವರಾಗಿದ್ದಾರೆ.
ಅ.24ರಂದು ಪೀಣ್ಯ ಠಾಣೆಯ ರೌಡಿಶೀಟರ್ ಆನಂದ್ ಅಲಿಯಾಸ್ ಶಿವಪುರ ಆನಂದ್‌ನನ್ನು ಮನೆ ಸಮೀಪದಲ್ಲಿಯೇ ಕೊಲೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಹಳೇ ದ್ವೇಷಕ್ಕೆ ಕೊಲೆ: ಕೊಲೆಯಾದ ಆನಂದ್ ಆರು ವರ್ಷಗಳ ಹಿಂದೆ ಪ್ರಕರಣ ವೊಂದರಲ್ಲಿ ಜೈಲು ಸೇರಿದ್ದ. ಜೈಲಿನಲ್ಲಿ ಕುಳಿತುಕೊಂಡೆ ಪೀಣ್ಯ ಠಾಣೆ ರೌಡಿಶೀಟರ್ ವಸಂತ ಎಂಬಾತನನ್ನು ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಳಿ ತನ್ನ ಸಹಚರರ ಮೂಲಕ ಕೊಲೆ ಮಾಡಿಸಿದ್ದ. ಅದೇ ದ್ವೇಷದ ಹಿನ್ನೆಲೆಯಲ್ಲಿ ವಸಂತನ ಸಹೋದರ ನಾಗೇಶ್ ಅಲಿಯಾಸ್ ನಾಗ ಆರು ವರ್ಷಗಳಿಂದ ಆನಂದ್ ಕೊಲೆಗೆ ಸಂಚು ರೂಪಿಸಿದ್ದ.
ಇದನ್ನೂ ಓದಿ;- ಸಚಿವ ಚವ್ಹಾಣರಿಂದ ಗ್ರಾಮ ಸಂಚಾರ
ಆದರೆ, ಸಾಧ್ಯವಾಗಿರಿಲ್ಲ. ಮೂರು ತಿಂಗಳ ಹಿಂದೆಯೂ ಹತ್ಯೆಗೆ ಸಂಚು ರೂಪಿಸಿ ವಿಫಲಗೊಂಡಿದ್ದ. ಅದೇ ವೇಳೆಯಲ್ಲಿ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಆನಂದ್, ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ತನ್ನ ಸ್ವಂತ ಊರಾದ ಚನ್ನರಾಯ ಪಟ್ಟಣದಲ್ಲಿ ವಾಸವಾಗಿದ್ದ. ಅ.24ರಂದು ಕೋರ್ಟ್‌ಗೆ ಹಾಜರಾಗಬೇಕೆಂದು ಅ.23ರಂದು ರಾತ್ರಿ ಶಿವಪುರದ ಮನೆಗೆ ಬಂದಿದ್ದ ಎಂದು ಪೊಲೀಸರು ಹೇಳಿದರು.
ಮುಳುವಾದ ಅದ್ದೂರಿ ಸ್ವಾಗತ: ಮೂರು ತಿಂಗಳ ಬಳಿಕ ಊರಿಗೆ ಬಂದಿದ್ದ ಆನಂದ್ ನನ್ನು ಅ.23ರಂದು ರಾತ್ರಿ ಆತನ ಹುಡುಗರು ಏರಿಯಾದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದರು. ಈ ವಿಚಾರ ತಿಳಿದ ನಾಗೇಶ್, ತನ್ನ ಸ್ನೇಹಿತ ಉಮೇಶ್ ಅಲಿಯಾಸ್ ಮಿಕಾಗೆ ಈ ವಿಚಾರ ತಿಳಿಸಿ ಹತ್ಯೆಗೆ ಸಂಚು ರೂಪಿಸಿದ್ದರು. ಅ.24ರಂದು ರಾತ್ರಿ ಆನಂದ್, ಮನೆಯಿಂದ ಹೊರಗಡೆ ಫೋನ್ ನಲ್ಲಿ ಮಾತನಾಡುತ್ತ ಸುಮಾರು 100 ಮೀಟರ್ ದೂರ ಬರುತ್ತಿದ್ದಂತೆ, ಅಲ್ಲೇ ಕಾಯುತ್ತಿದ್ದ ನಾಗೇಶ್ ಮತ್ತು ತಂಡ ಏಕಾಏಕಿ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿತ್ತು ಎಂದು ಪೊಲೀಸರು ಹೇಳಿದರು.
ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಆರೋಪಿಗಳು –
ಕೃತ್ಯ ಎಸಗಿದ ಆರೋಪಿಗಳು ನೇರವಾಗಿ ಧರ್ಮಸ್ಥಳಕ್ಕೆ ಹೋಗಿ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಶ್ರೀಮಂಜು ನಾಥನ ದರ್ಶನ ಪಡೆದು, ಅಲ್ಲಿಯೇ ಒಂದು ದಿನ ತಂಗಿದ್ದರು. ನಂತರ ಅ.27ರಂದು ಬೆಂಗಳೂರಿಗೆ ಬರುತ್ತಿರುವ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.