ಬೆಂಗಳೂರು: ರಸ್ತೆಯಲ್ಲಿ ಹೋಗುವಾಗ ಕಾರು ಗಳಿಗೆ ತನ್ನ ದ್ವಿಚಕ್ರ ವಾಹನ ತಗುಲಿಸಿ ಉದ್ದೇಶಪೂರ್ವಕವಾಗಿ ಜಗಳ ತೆಗೆದು ಚಾಲಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಜೇಂದ್ರನಗರದ ಹಳೆಕೆಸರೆ ನಿವಾಸಿ ಜಮೀಲ್ ಖಾನ್ (29) ಬಂಧಿತ. ಆರೋಪಿ ಯಿಂದ 40 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಜೂನ್ 14ರಂದು ಜಯನಗರ 4ನೇ ಬ್ಲಾಕ್‌ನ ಕೂಲ್ ಜಾಯಿಂಟ್ ವೃತ್ತದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದರು. ಆಗ ಆರೋಪಿ ಉದ್ದೇಶಪೂರ್ವಕವಾಗಿ ಕಾರಿಗೆ ಕೈನಿಂದ ಗುದ್ದಿ, ಕಾರು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದ. ಬೈಕ್‌ಗೆ ಕಾರು ತಗುಲಿದ್ದು, ಹಣ ನೀಡುವಂತೆ ಹೆದರಿಸಿದ್ದಾನೆ. ಅದಕ್ಕೆ ಚಾಲಕ ನಿರಾಕರಿಸಿದಾಗ ದೂರುದಾರರ ಮೊಬೈಲ್ ಕಸಿದುಕೊಂಡು ಚಾಲಕನ ಖಾತೆಯಿಂದ 30 ಸಾವಿರ ರೂ. ಅನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಅಲ್ಲದೇ ಚಾಲಕನ ಜೇಬಿನಲ್ಲಿದ್ದ 300 ರೂ. ಅನ್ನು ಕಸಿದುಕೊಂಡು ಪರಾರಿ ಯಾಗಿದ್ದ. ಈ ಸಂಬಂಧ ಕಾರು ಚಾಲಕ ಪ್ರಸಾದ್ ಕುಡುವ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ವೃತ್ತಿಪರ ಸುಲಿಗೆಕೋರನಾಗಿದ್ದು, ಆತನ ವಿರುದ್ಧ ಕೆ.ಆರ್ ಸಾಗರ, ಅಶೋಕಪುರ, ಮದ್ದೂರು, ಬಿಳಿಕೆರೆ ಪೊಲೀಸ್ ಠಾಣೆ ಸೇರಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ 17 ಪ್ರಕರಣಗಳು ದಾಖ ಲಾಗಿವೆ. ಮೋಜಿನ ಜೀವನಕ್ಕಾಗಿ ಆರೋಪಿ ಸುಮಾರು ಆರೇಳು ವರ್ಷಗಳಿಂದ ಇದೇ ಮಾದರಿಯಲ್ಲಿ ಸುಲಿಗೆ ಮಾಡುವುದನ್ನು ರೂಢಿಗತ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.