ಬೆಂಗಳೂರು: ಹೆಚ್ಚು ಕೆಲಸ ಮಾಡುವಂತೆ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಸಹೋದ್ಯೋಗಿ ಗುಲ್ಫಾಮ್ ಅಲಿಯಾಸ್ ಗುಲ್ಲು ಎಂಬಾತನನ್ನು ಕೊಲೆಗೈದಿದ್ದ ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಮೂಲದ ಮೊಹ ಮ್ಮದ್ ದಿಲ್‌ಖುಷ್(29) ಬಂಧಿತ.
ಆರೋಪಿ ಡಿ.18 ರಂದು ಸಹೋದ್ಯೋಗಿ ಗುಲ್ಫಾಮ್ ಎಂಬಾತ ನನ್ನು ಕೊಲೆಗೈದು, ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರಪ್ರದೇಶದ ವಾರಣಾಸಿ ಮೂಲದ ಗುಲ್ಫಾಮ್ ಮತ್ತು ಮೊಹಮ್ಮದ್ ದಿಲ್‌ಖುಷ್ ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಫ್ಯಾಬ್ರಿಕೇಷನ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಮಳಿಗೆ ಸಮೀಪದಲ್ಲೇ ಇಬ್ಬರು ಒಂದೇ ಕೋಣೆಯಲ್ಲಿ ವಾಸವಾಗಿದ್ದರು. ಕೆಲಸದ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೆಲಸದಲ್ಲಿ ಹಿರಿಯನಾಗಿದ್ದ ಗುಲ್ಫಾಮ್, ಬಾಕಿ ಉಳಿದಿದ್ದ ಕೆಲಸ ಮಾಡಿ ಮುಗಿಸುವಂತೆ ಮೊಹಮ್ಮದ್ ದಿಲ್‌ಖುಷ್‌ಗೆ ಪೀಡಿಸುತ್ತಿದ್ದ. ಆದರೆ, ಹೆಚ್ಚು ಕೆಲಸ ಮಾಡುವುದಿಲ್ಲ ಎಂದು ದಿಲ್‌ಖುಷ್ ಪ್ರತಿಕ್ರಿಯಿಸಿ, ಜಗಳ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಡಿ.18ರಂದು ಕೂಡ ಇಬ್ಬರ ನಡುವೆ ಕೆಲಸದ ವಿಚಾರಕ್ಕೆ ಜಗಳ ನಡೆದಿದೆ.
ಬಳಿಕ ಗುಲ್ಫಾಮ್ ಹೋಗಿ ಮಲಗಿದ್ದಾನೆ. ಈ ವೇಳೆ ಆರೋಪಿ, ಆತನ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಇರಿಸಿ ಮಳಿಗೆ ಬಳಿಯೇ ಎಸೆದಿದ್ದ. ನಂತರ, ವಾರಣಾಸಿಗೆ ಪರಾರಿಯಾ ಗಿದ್ದ. ಮತ್ತೂಂದೆಡೆ ಗುಲ್ಫಾಮ್ ನಾಪತ್ತೆಯಾಗಿದ್ದ ಬಗ್ಗೆ ಸಂಬಂಧಿಕರು ಡಿ.21ರಂದು ದೂರು ನೀಡಿದ್ದರು. ಬಳಿಕ ಶೋಧಿಸಿದಾಗ ಗೋಣಿಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಉತ್ತರಪ್ರದೇಶಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ.