ಹುಬ್ಬಳ್ಳಿ: ತರಕಾರಿ ವ್ಯಾಪಾರಿಯನ್ನು ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಆರೋಪದಡಿ ಇಲ್ಲಿನ ಭೈರಿದೇವರಕೊಪ್ಪ ಚರ್ಚ್‌ನ ಪಾಸ್ಟರ್ ಅನ್ನು ಎಪಿಎಂಸಿ-ನವನಗರ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ.
ಮೂಲತಃ ಸುತಗಟ್ಟಿಯ ಇಲ್ಲಿನ ನವನಗರ ನಿವಾಸಿ ಪಾಸ್ಟರ್ ಸೋಮು ಎಂಬುವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಪಾಸ್ಟರ್ ಎಪಿಎಂಸಿಯ ತರಕಾರಿ ವ್ಯಾಪಾರಿ ವಿಶ್ವನಾಥ ಎಂಬುವರನ್ನು ಮತಾಂತರಕ್ಕೆ ಪ್ರಯತ್ನಿಸಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಎಪಿಎಂಸಿ-ನವನಗರ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಪೊಲೀಸರು ಪಾಸ್ಟರ್ ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನವನಗರದಲ್ಲಿ ಹು-ಧಾ ಮುಖ್ಯರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು. ಜತೆಗೆ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಎಪಿಎಂಸಿ-ನವನಗರ ಠಾಣೆಗೆ ಮುತ್ತಿಗೆ ಹಾಕಿ ರಾತ್ರಿವರೆಗೆ ಪ್ರತಿಭಟಿಸಿದ್ದರು.
ಪೊಲೀಸ್ ಆಯುಕ್ತರು ಪಾಸ್ಟರ್ ಬಂಧಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದಿದ್ದರು. ಸೋಮವಾರ ಬೆಳಗ್ಗೆ ಪೊಲೀಸರು ಪಾಸ್ಟರ್ ಅವರನ್ನು ಬೆಂಗಳೂರು ಮಾರ್ಗದಲ್ಲಿ ಬಂಧಿಸಿ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಮೊಬೈಲ್, ನಗದಿದ್ದ ವ್ಯಾನಿಟಿ ಬ್ಯಾಗ್ ಕಳವು: ನಿವೃತ್ತ ಜಂಟಿ ನಿರ್ದೇಶಕರೊಬ್ಬರು ಕುಟುಂಬ ಸಮೇತ ಬೆಳಗಾವಿ ಸೂಪರ್ ಫಾಸ್ಟ್ ಎಕ್ಸಪ್ರಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳರು ರಾತ್ರಿ ವೇಳೆ ಅವರ ಪತ್ನಿ ಬಳಿಯಿದ್ದ 70 ಸಾವಿರ ರೂ. ನಗದು, 1ಲಕ್ಷ ರೂ. ಮೌಲ್ಯದ ಆ್ಯಪಲ್ ಮೊಬೈಲ್ ಮತ್ತು 15 ಸಾವಿರ ರೂ. ಕಿಮ್ಮತ್ತಿನ ಮೊಬೈಲ್, ಇತರೆ ದಾಖಲಾತಿಗಳಿದ್ದ ವ್ಯಾನಿಟಿ ಬ್ಯಾಗ್ ಕದ್ದಿದ್ದಾರೆ.
ಬೆಂಗಳೂರು ಮೂಡಲಪಾಳ್ಯ ಎಸ್‌ವಿಜಿ ನಗರದ ಡಾ| ಎಂ. ಪ್ರಕಾಶಕುಮಾರ ಅವರು ಶನಿವಾರ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದಾಗ ಕಳ್ಳರು ಹುಬ್ಬಳ್ಳಿ ರೈಲ್ವೆ ನಿಲ್ದಾಣ ಬರುವುದರೊಳಗೆ 1.15ಲಕ್ಷ ರೂ. ಮೌಲ್ಯದ ಮೊಬೈಲ್‌ಗಳು ಮತ್ತು ಹಣವಿದ್ದ ಬ್ಯಾಗ್ ಕಳುವು ಮಾಡಿದ್ದಾರೆ. ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.