ಅನಂತ್‌ನಾಗ್: ಭದ್ರತಾ ಪಡೆಗಳು ಶುಕ್ರವಾರ ಹತ್ಯೆಗೈದಿರುವ ಆರು ಮಂದಿ ಉಗ್ರರ ವೈಕಿ ಓರ್ವ ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆಯ ಆರೋಪಿ ಎಂದು ಗುರುತಿಸಲಾಗಿದೆ.
ಹತ್ಯೆಗೀಡಾಗಿರುವ ಆರೋಪಿ ಉಗ್ರ ಅಜಾದ್ ಅಹಮದ್ ಮಲಿಕ್ ಅಲಿಯಾಸ್ ಅಜಾದ್ ದಾದಾ ಎನ್ನುವವನಾಗಿದ್ದು, ನಿಷೇಧಿತ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಸದಸ್ಯ ನಾಗಿದ್ದು ಅನಂತ್‌ನಾಗ್ ಜಿಲ್ಲೆಯ ಅರ್ವಾನಿ ಮೂಲದವನು ಎಂದು ತಿಳಿದು ಬಂದಿದೆ.
ಶುಕ್ರವಾರ ನಸುಕಿನ ವೇಳೆ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಮಂದಿ ಉಗ್ರರನ್ನು 3 ನೇ ರಾಷ್ಟ್ರೀಯ ರೈಫಲ್ಸ್‌ನ ಯೋಧರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದ್ದರು.
ಜೂನ್ 14 ರಂದು ಶುಜಾತ್ ಬುಖಾರಿ ಅವರನ್ನು ಕಚೇರಿ ಹೊರಗೆ ಬೈಕ್‌ನಲ್ಲಿ ಆಗಮಿಸಿದ್ದ ಮೂವರು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು. ದಾಳಿಯಲ್ಲಿ ಇಬ್ಬರು ಭದ್ರತಾ ಸಿಬಂದಿಗಳೂ ಮೃತ ಪಟ್ಟಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹತ್ಯೆ ಆರೋಪಿಗಳ ಹೆಸರುಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಮಲೀಕ್, ಮುಜಾಫರ್ ಅಹ್ಮದ್, ನಾವೀದ್ ಜುಟ್ಟ್ ಮತ್ತು ಸಾಜದ್ ಗುಲ್ ಎನ್ನುವವರು ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದರು.
ಮಲೀಕ್, ಮುಜಾಫರ್ ಅಹ್ಮದ್, ನಾವೀದ್ ಜುಟ್ಟ್ ಲಷ್ಕರ್ ಉಗ್ರರಾಗಿದ್ದರೆ, ಸಾಜದ್ ಪಾಕ್‌ನ ಕಾಶ್ಮೀರ ಪ್ರಾಂತ್ಯದವನಾಗಿದ್ದ.