ಮಡಿಕೇರಿ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಂಗಡಿ ಮತ್ತು ದೇವಾಲಯದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾಪೋಕ್ಲು ಸಮೀಪದ ನಾಲಾಡಿ ಗ್ರಾಮದ ನಿವಾಸಿ ಅಶೋಕ ಕೆ.ಸಿ. (35) ಬಂಧಿತ ಆರೋಪಿಯಾಗಿದ್ದು, 21.3 ಗ್ರಾಂ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನವನ್ನು
ವಶಪಡಿಸಿಕೊಳ್ಳಲಾಗಿದೆ.
ನಗರದ ಹೊರವಲಯದ ತಾಳತ್‌ಮನೆ ನಿವಾಸಿ ಭರತ್ ಅವರಿಗೆ ಸೇರಿದ ಕೋಳಿ ಮಾಂಸದ ಅಂಗಡಿ ಮತ್ತು ಜ್ಯೂಸ್ ಅಂಗಡಿಯಿಂದ ಜೂ. 5ರಂದು 10 ಸಾವಿರ ರೂ. ನಗದು, 52 ಗ್ರಾಂ ಚಿನ್ನಾಭರಣ ಹಾಗೂ ಅಂಗಡಿಯ ಮುಂಭಾಗ ನಿಲ್ಲಿಸಿದ್ದ 1 ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಗ್ರಾಮಾಂತರ ಠಾಣಾ ಪೊಲೀಸರು ಜು.1ರಂದು ಆರೋಪಿ ಕೆ.ಸಿ. ಅಶೋಕನನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಬೆಟ್ಟಗೇರಿಯಲ್ಲಿ ಅಂಗಡಿ ಕಳವು ಮಾಡಿರುವುದು ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೆಕಾಡು ಗ್ರಾಮದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಸ್ಥಾನದಲ್ಲಿ ಹುಂಡಿ ಕಳವು ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.