ಬೆಂಗಳೂರು: ಗೃಹಿಣಿಯೊಬ್ಬರ ಸಾವಿಗೆ ಕಾರಣವಾಗಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಬೊಮ್ಮನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ವೆಂಕಟೇಶ್ (29) ಬಂಧಿತ.
2018ರ ನವೆಂಬರ್‌ನಲ್ಲಿ ಸುಮಾ ಎಂಬಾಕೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಡ್ರಗ್ಸ್ ಕೇಸ್ ನಲ್ಲಿ ಚಿಕ್ಕ, ಚಿಕ್ಕ ಮೀನುಗಳನ್ನು ಹಿಡಿಯಲಾಗಿದೆ : ಇಂದ್ರಜಿತ್ ಲಂಕೇಶ್
ವಿವಾಹಿತೆ ಸುಮಾರನ್ನು ಪ್ರೀತಿಸುವಂತೆ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಆಕೆಯಿಂದ ಸಾಕಷ್ಟು ಹಣ ಹಾಗೂ ಚಿನ್ನಾಭರಣ ಪಡೆದುಕೊಂಡು ವಾಪಸ್ ಕೊಟ್ಟಿರಲಿಲ್ಲ. ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದಿದ್ದ ಸುಮಾ 2018ರ ನ.3ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೆಲ ದಿನಗಳ ಬಳಿಕ ಆಕೆಯ ಗಂಡ ಹಾಗೂ ಮಕ್ಕಳು ಮನೆ ಸ್ವತ್ಛಗೊಳಿಸುವಾಗ ಆಕೆ ಬರೆದಿಟ್ಟಿದ್ದ ಡೆತ್‌ನೋಟ್ ಸಿಕ್ಕಿತ್ತು. ಅದರಲ್ಲಿ ” ನನ್ನ ಸಾವಿಗೆ ವೆಂಕಟೇಶ್ ಕಾರಣ’ ಎಂದು ಸುಮಾ ಬರೆದಿದ್ದರು. ಈ ಡೆತ್‌ನೋಟ್ ಆಧರಿಸಿ ವೆಂಕಟೇಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ರೈತರಿಗೆ ಲುಕೌಟ್ ಬಿಸಿ : ನಾಯಕರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ಕೇಸು
ಪ್ರಕರಣ ದಾಖಲಾದ ದಿನದಿಂದಲೂ ಆರೋಪಿ ವೆಂಕಟೇಶ್ ತಲೆಮರೆಸಿ ಕೊಂಡಿದ್ದ. ಪದೇ ಪದೆ ವಿಳಾಸ ಬದಲಾಯಿಸುತ್ತಿದ್ದ. ಅಂತಿಮವಾಗಿ ತನಿಖಾ ತಂಡ ವೆಂಕಟೇಶ್‌ನನ್ನು ಮೂರು ದಿನಗಳ ಹಿಂದೆ ಬಂಧಿಸಿ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.