ಬೆಂಗಳೂರು: ವ್ಯಾಪಾರದ ಪ್ರತಿಸ್ಪರ್ಧಿಗಳನ್ನು ಸಂಕ ಷ್ಟಕ್ಕೆ ಸಿಲುಕಿಸಲು, ಗಣರಾಜ್ಯೋತ್ಸವದ ದಿನ ನಗರದ ವಿವಿಧೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಲಾಗಿದೆ ಎಂದು ಪೊಲೀಸ್ ಸಹಾಯ ವಾಣಿ ಕೊಠಡಿಗೆ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಾಜಿನಗರದ ಮನ್ಸೂರ್(40) ಬಂಧಿತ. ಪೊಲೀಸ್ ಆಯುಕ್ತರ ಕಚೇರಿಯ ಸಹಾಯ ವಾಣಿ ಕೊಠಡಿಯ ಪಿಎಸ್‌ಐ ಎಂ.ಸುಬ್ರಮಣಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?: ಜ.9ರಂದು ಸಂಜೆ ಸುಮಾರು 5.30ಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ವ್ಯಕ್ತಿ ತನ್ನ ಹೆಸರು ರಿಯಾಜ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಈತ ಆರು ಜನ ವ್ಯಕ್ತಿಗಳ ಹೆಸರು ಮತ್ತು ಅವರ ಮೊಬೈಲ್ ಸಂಖ್ಯೆಗಳ ಮಾಹಿತಿ ನೀಡಿ, ಈ ವ್ಯಕ್ತಿಗಳು ಗಣರಾಜ್ಯೋತ್ಸವದ ದಿನ ನಗರದಲ್ಲಿ ವಿವಿಧೆಡೆ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ರೀತಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಕರೆ ಮಾಡಿದ್ದ ವ್ಯಕ್ತಿಯ ಬಗ್ಗೆ ಅನುಮಾನಗೊಂಡ ಕಂಟ್ರೋಲ್ ರೂಮ್ ಪಿಎಸ್‌ಐ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮೊಬೈಲ್ ಸಂಖ್ಯೆಯ ಸುಳಿವು ಆಧರಿಸಿ ಕರೆ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆತನ ಅಸಲಿ ಹೆಸರು ಮನ್ಸೂರ್ ಎಂಬುದು ಗೊತ್ತಾಗಿದೆ.
ಬಳಿಕ ಆತ ಕೆಲವು ವ್ಯಕ್ತಿಗಳ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಹುಸಿ ಬಾಂಬ್ ಸ್ಫೋಟದ ಕಥೆ ಹೇಳಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿ ಮನ್ಸೂರ್ ಈ ಹಿಂದೆ ಕೆ.ಆರ್.ಮಾರ್ಕೆಟ್ ಬಳಿ ಪ್ರಾವಿಷನ್ ಸ್ಟೋರ್ ಅಂಗಡಿ ನಡೆಸುತ್ತಿದ್ದ. ನಷ್ಟದ ಹಿನ್ನೆಲೆಯಲ್ಲಿ ಅಂಗಡಿ ಮುಚ್ಚಿದ್ದ. ಬಳಿಕ ಗುಜರಿ ವ್ಯಾಪಾರ ಆರಂಭಿಸಿದ್ದು, ಅದು ಕೈ ಹಿಡಿಯಲಿಲ್ಲ. ಹೀಗಾಗಿ ವ್ಯಾಪಾರದಲ್ಲಿ ತನಗೆ ಪ್ರತಿಸ್ಪರ್ಧಿಗಳಾಗಿದ್ದ ಆರು ಮಂದಿಯ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಹೀಗಾಗಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶ ದಿಂದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಸುಳ್ಳು ಕಥೆ ಕಟ್ಟಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.