ಬೆಂಗಳೂರು: ಪಿತೃಪಕ್ಷದ ಪೂಜೆ ಹಿನ್ನೆಲೆಯಲ್ಲಿ ಮದ್ಯದ ಪಾರ್ಟಿ ಮಾಡುವಾಗ ಕಾಲು ತುಳಿದ ವಿಚಾರಕ್ಕೆ ನೆರೆ ಮನೆಯ ವ್ಯಕ್ತಿಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೊಣ್ಣೇನಹಳ್ಳಿ ನಿವಾಸಿ ಮೂರ್ತಿ(52) ಕೊಲೆಯಾದವರು. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಕೊಲೆ ಸಂಬಂಧ ಸೊಣ್ಣೇನಹಳ್ಳಿ ನಿವಾಸಿ ಕೀರ್ತಿ(27) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೂರ್ತಿ ಹಾಗೂ ಕೀರ್ತಿ ಅಕ್ಕ-ಪಕ್ಕದ ನಿವಾಸಿಗಳಾ ಗಿದ್ದಾರೆ. ಮೂರ್ತಿ ಹಸು ಸಾಕುವ ಕೆಲಸ ಮಾಡಿದರೆ, ಕೀರ್ತಿ ಹಣಕಾಸು ವ್ಯವಹಾರ ನಡೆಸುತ್ತಿದ್ದ. ಮೂರ್ತಿ ಸಹೋದರನ ಮನೆಯಲ್ಲಿ ಭಾನುವಾರ ಪಿತೃಪಕ್ಷದ ಪೂಜೆ ಇದ್ದಿದ್ದರಿಂದ ಸ್ನೇಹಿತರು, ಸಂಬಂಧಿಕರು, ನೊರೆಹೊರೆಯವರನ್ನು ಊಟಕ್ಕೆ ಆಹ್ವಾನಿಸಲಾಗಿತ್ತು. ಊಟಕ್ಕೂ ಮುನ್ನ ಮೂರ್ತಿ ಸೇರಿ ಕೆಲವರು ಮನೆಯ ಟೆರೇಸ್ ಮೇಲೆ ಪಾರ್ಟಿ ಮಾಡುತ್ತಿದ್ದರು.
ಕಾಲು ತುಳಿದಿದ್ದಕ್ಕೆ ಕೊಲೆ: ಈ ವೇಳೆ ಮದ್ಯದ ಅಮಲಿನಲ್ಲಿ ಮೂರ್ತಿ, ಆರೋಪಿ ಕೀರ್ತಿಯ ಕಾಲು ತುಳಿದಿದ್ದಾರೆ. ಅದರಿಂದ ಕೋಪಗೊಂಡ ಆರೋಪಿ, ಮೂರ್ತಿ ಜತೆ ಜಗಳ ತೆಗೆದು ಪರಸ್ಪರ ಮಾತಿನ ಚಕಮಕಿ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಆಕ್ರೋಶಗೊಂಡ ಕೀರ್ತಿ, ಏಕಾಏಕಿ ಚಾಕು ತೆಗೆದು ಮೂರ್ತಿಯ ಹೊಟ್ಟೆಗೆ ಇರಿದಿದ್ದಾನೆ. ಅದರಿಂದ ತೀವ್ರರಕ್ತಸ್ರಾವವಾಗಿ ಕುಸಿದು ಬಿದ್ದ ಮೂರ್ತಿಯನ್ನು ಕುಟುಂಬದ ಸದಸ್ಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು, ಮಾರ್ಗ ಮಧ್ಯೆಯೇ ಮೂರ್ತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜ್ಞಾನಭಾರತಿ ಠಾಣೆ ಪೊಲೀಸರು ಪರಿಶೀಲಿಸಿ, ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಕೀರ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.