Advertisement

ಜೀವಾವಧಿ: 15 ವರ್ಷ ಬಳಿಕ ಸೆರೆ

04:20 PM Dec 21, 2022 | Team Udayavani |

ಬೆಂಗಳೂರು: ಜೀವಾವಧಿ ಶಿಕ್ಷೆ ಬಂಧಿತ ಅಪರಾಧಿಯನ್ನು 15 ವರ್ಷಗಳ ಬಳಿಕ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

Advertisement

ಸುಹೇಲ್‌ ಬಂಧಿತ ಅಪರಾಧಿ. ಈತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸುಹೇಲ್‌ ಎಂಬ ಹೆಸರನ್ನು ಮೊಹಮ್ಮದ್‌ ಅಯಾಜ್‌ ಎಂದು ಬದಲಾವಣೆ ಮಾಡಿಕೊಂಡು ಸಾಗರ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ಆಯುರ್ವೇದಿಕ್‌ ಮೆಡಿಸನ್‌ ವ್ಯವಹಾರ ಮಾಡಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ ಡಿ.19ರಂದು ಬೆಳ್ತಂಗಡಿಯಲ್ಲಿ ಬಂಧಿಸಲಾಗಿದೆ.

ಸುಹೇಲ್‌ ಮತ್ತು ತಂಡ 2000ರಲ್ಲಿ ನಿವೃತ್ತ ಸೈನಿಕನನ್ನು ಕೊಂದು ದರೋಡೆ ಮಾಡಿದ್ದರು. ಈ ವೇಳೆ ಸಹಚರ ವೇಣುಗೋಪಾಲ್‌ ಎಂಬಾತ ಸುಹೇಲ್‌ ಮೇಲೆ ಹಲ್ಲೆ ನಡೆಸಿದ್ದ. ಅರೆಪ್ರಜ್ಞಾಸ್ಥಿತಿಯಲ್ಲಿದ್ದ ಸುಹೇಲ್‌ ಕಂಡು ಮೃತಪಟ್ಟಿದ್ದಾನೆ ಎಂದು ವೇಣುಗೋಪಾಲ್‌ ಹೋಗಿದ್ದ. ಕೆಲ ಕ್ಷಣಗಳ ಬಳಿಕ ಸ್ಥಳಕ್ಕೆ ಬಂದ ಶಂಕರ್‌ ಎಂಬಾತ ಸುಹೇಲ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದ. ಚೇತರಿಸಿಕೊಂಡಿದ್ದ ಸುಹೇಲ್‌ನನ್ನು ಶೇಷಾದ್ರಿಪುರಂ ಪೊಲೀಸರು ಸುಲಿಗೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದರು.

ಆಗ ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ, ಡಕಾಯಿತಿ ಕೇಸ್‌ನಲ್ಲಿ ಭಾಗಿಯಾಗಿರುವುದು ಪತ್ತೆಯಾಗಿ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌ 2004ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, 2007ರಲ್ಲಿ ತಾಯಿಗೆ ಅನಾರೋಗ್ಯ ಕಾರಣ ನೀಡಿ 30 ದಿನಗಳ ಪೆರೋಲ್‌ ಪಡೆದು ಬಿಡುಗಡೆಯಾಗಿ ಮನೆಗೂ ಹೋಗದೆ ತಲೆಮರೆಸಿಕೊಂಡಿದ್ದಾನೆ. ಪುಣೆ ಮತ್ತು ಶಿವಾಜಿನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಬಳಿಕ ಹಾಸನದಲ್ಲಿ ಆಟೋ ಓಡಿಸುತ್ತಿದ್ದ. ಈ ವೇಳೆ ಅಕ್ರಂ ಎಂಬಾತನ ಪರಿಚಯವಾಗಿ, ಈತನ ಸಂಪರ್ಕದಿಂದ ಉಪ್ಪಿ ನಂಗಡಿಯಲ್ಲಿರುವ ಯುವತಿ ಜತೆ ಮದುವೆಯಾಗಿದ್ದ. ಬಳಿಕ ಸಾಕಷ್ಟು ಪುಸ್ತಕಗಳು ಮತ್ತು ಯುಟ್ಯೂಬ್‌ ಮೂಲಕ ಆಯುರ್ವೇದಿಕ್‌ ಚಿಕಿತ್ಸೆ ನೀಡುವ ಕುರಿತು ತರಬೇತಿ ಪಡೆದು, ಉಪ್ಪಿನಂಗಡಿಯಲ್ಲಿ ಪ್ರತ್ಯೇಕವಾಗಿ ಅಂಗಡಿ ಇಟ್ಟುಕೊಂಡು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುತ್ತಿದ್ದ ಎಂಬುದು ಗೊತ್ತಾಗಿತ್ತು.

ಒಂದು ಲಕ್ಷ ರೂ. ರಿವಾರ್ಡ್‌: ಈ ಮಧ್ಯೆ ಕೆಲ ತಿಂಗಳ ಹಿಂದೆ ಎಡಿಜಿಪಿ ಅಲೋಕ್‌ ಕುಮಾರ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ರಿವಾರ್ಡ್‌ ಕೊಡುವಂತೆಯೂ ಸೂಚಿಸಿದ್ದರು. ಆಗ ಮಡಿವಾಳ ಪಿಎಸ್‌ಐ ಕಿಶೋರ್‌, ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ನಂತರ ಸುಹೇಲ್‌ನ ಸಹಚರರ ಬಗ್ಗೆಯೂ ಮಾಹಿತಿ ಪಡೆದಾಗ ಶಂಕರ್‌ ಎಂಬಾತನ ಮಾಹಿತಿ ಸಿಕ್ಕಿತ್ತು. ಆದರೆ, 2017ರಲ್ಲಿ ಅಪರಿಚಿತ ಶವದ ರೀತಿ ಶಂಕರ್‌ ಮೃತದೇಹ ಪತ್ತೆ ಯಾಗಿತ್ತು. ಕೆಲ ದಿನಗಳ ಬಳಿಕ ದಿನೇಶ್‌ ಎಂಬಾತ ಶಂಕರ್‌ ಮೃತ ದೇಹವನ್ನು ಗುರುತಿ ಸಿದ್ದ. ಅಲ್ಲದೆ, ದಿನೇಶ್‌ನನ ಹೇಳಿಕೆಯಲ್ಲಿ “ಶಂಕರ್‌ ಉಪ್ಪಿನಂಗಡಿಯಲ್ಲಿರುವ ಸಾಗರ್‌ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡಿಕೊಂಡು ಆಗಾಗ್ಗೆ ಬೆಂಗಳೂರಿಗೆ ಬಂದು ನನ್ನನ್ನು ಭೇಟಿ ಆಗುತ್ತಿದ್ದ’ ಎಂದಿದ್ದ.

Advertisement

ಅಂಗಡಿ ಜಿಎಸ್‌ಟಿ, ದೇಹದ ಗಾಯ ಗುರುತು: ತನಿಖೆ ಮುಂದುವರಿಸಿ ಸಾಗರ್‌ ಎಂಟರ್‌ಪ್ರೈಸಸ್‌ನ ಜಿಎಸ್‌ಟಿ ನಂಬರ್‌ ಪತ್ತೆ ಹಚ್ಚಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಜಿಎಸ್‌ಟಿ ನಂಬರ್‌ನ ಮಾಲೀಕರ ಹೆಸರು ಕೇಳಿದಾಗ, ಮೊಹಮ್ಮದ್‌ ಅಯಾಜ್‌ ಸನ್‌ ಆಫ್ ಸುಲೈಮಾನ್‌ ಎಂದು ಫೋಟೋ ಸಮೇತ ಕಳುಹಿಸಿದ್ದರು. ಮತ್ತೂಂದೆಡೆ ಇದೇ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದ ವೇಣುಗೋಪಾಲ್‌ನ ವಿಚಾರಣೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಬಂದಿದ್ದ ಫೋಟೋ ತೋರಿಸಿದಾಗ ಹೊಲಿಕೆ ಇದೆ ಎಂದಿದ್ದ. ಜತೆಗೆ ಸುಹೇಲ್‌ ಮೇಲೆ ನಾನು ಹಲ್ಲೆ ನಡೆಸಿದ್ದಾಗ ಆತನ ಬೆನ್ನು ಹಾಗೂ ಕಣ್ಣಿನ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಆ ಗಾಯದ ಮೇಲೆ ಹೊಲಿಗೆ ಹಾಕಿ ದ್ದಾರೆ. ಆ ಗುರುತು ಹಾಗೂ ಎಡಗೈನ ಒಂದು ಬೆರಳು ಮಡಚಲು ಸಾಧ್ಯವಾಗುವುದಿಲ್ಲ ಎಂದಿದ್ದ. ಇದೇ ಮಾಹಿತಿ ಮೇರೆಗೆ ಕಿಶೋರ್‌ ಮತ್ತು ತಂಡ ಬೆಳ್ತಂಗಡಿಗೆ ಹೋದಾಗ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ವ್ಯಕ್ತಿ ಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಣೆ ಆರಂಭಿಸಿತ್ತು.

ನೀವು ಬೆಂಗಳೂರು ಪೊಲೀಸರಾ!: ಬಳಿಕ 4 ದಿನಗಳ ಹಿಂದೆ ಸಂಜೆ 7 ಗಂಟೆ ಸುಮಾರಿಗೆ ಆತನ ಮನೆಗೆ ಹೋಗಿದ್ದ ಪಿಎಸ್‌ಐ ಕಿಶೋರ್‌, ಮೊದಲಿಗೆ ಆತನ ಕೈ ಬೆರಳು ನೋಡಿದಾಗ ಅದು ಬೆಂಡಾಗಿತ್ತು. ನಂತರ ಕಣ್ಣಿನ ಭಾಗದಲ್ಲಿ ಪೆಟ್ಟು ಬಿದ್ದಿರುವ ಗುರುತು ಸಿಕ್ಕಿತ್ತು. ಕೂಡಲೇ ಆತನನ್ನು ವಶಕ್ಕೆ ಪಡೆದುಕೊಂಡು ಕಾರಿನಲ್ಲಿ ಕೂರಿಸಿಕೊಂಡು ಹೋಗುವ ಮಾರ್ಗ ಮಧ್ಯೆ ಶರ್ಟ್‌ ಕಳಚಲು ಹೇಳುತ್ತಿದ್ದಂತೆ, ಸುಹೇಲ್‌ ಸ್ವಯಂ ಪ್ರೇರಿತವಾಗಿ “ನೀವು ಬೆಂಗಳೂರು ಪೊಲೀಸರಾ’ ಎಂದು ಹೇಳಿ ಪೊಲೀಸರಿಗೆ ಅಚ್ಚರಿ ಮೂಡಿಸಿದ್ದ. ನಂತರ ಪಿಎಸ್‌ಐ ಕಿಶೋರ್‌, “ನೀನು ಮೊಹಮ್ಮದ್‌ ಅಯಾಜ್‌ ಅಲ್ಲ, ಮೊಹಮ್ಮದ್‌ ಸುಹೇಲ್‌’ ಎಂದು ಹೇಳುತ್ತಿದ್ದಂತೆ ಮುಗುಳು ನಗೆ ಬೀರಿದ್ದ.

Advertisement

Udayavani is now on Telegram. Click here to join our channel and stay updated with the latest news.

Next