ಮಲ್ಪೆ: ಉಡುಪಿ ಕೆಳಾರ್ಕಳಬೆಟ್ಟುವಿನ ಆಭರಣ ತಯಾರಿಕಾ ಘಟಕದ ಬೀಗ ಮುರಿದು ಕಳ್ಳತನ ನಡೆಸಿದ್ದ ಆರೋಪಿ ಪಶ್ಚಿಮ ಬಂಗಾಳ ಮೇದಿನಿಪುರ ಜಿಲ್ಲೆಯ ಸುಭಾಶಿಷ್ ಬೇರಾ (38) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿ ಕಳವುಗೈದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ನ. 25ರಂದು ಕೆಳಾರ್ಕಳಬೆಟ್ಟು ಗ್ರಾಮದ ಸ್ವರ್ಣೋದ್ಯಮ ಚಿನ್ನದ ಆಭರಣ ತಯಾರಿಕಾ ಸಂಸ್ಥೆಯಲ್ಲಿ ರಾತ್ರಿ ಕಳವಾಗಿತ್ತು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಕೈಗೆತ್ತಿಕೊಂಡ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ಠಾಣಾಧಿಕಾರಿ ಗುರುನಾಥ ಬಿ. ಹಾದಿಮನಿ ಅವರ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸು, ಕಳವು ಮಾಡಿದ ಜಾಡನ್ನು ಬೆನ್ನತ್ತಿದ ತಂಡವು ಪಶ್ಚಿಮ ಬಂಗಾಳ ರಾಜ್ಯಕ್ಕೆ ತೆರಳಿ ಕಳ್ಳತನಗೈದ ಆರೋಪಿ ಸುಭಾಷ್ ಬೇರಾ ಹಿಡಿದು ಬಂಧಿಸಿತು. ಈತ ಈ ಹಿಂದೆ ಇದೇ ಸ್ವರ್ಣೋದ್ಯಮದಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಠಾಣಾ ಸಿಬ್ಬಂದಿಗಳಾದ ಎಎಸ್‌ಐ ರವಿಚಂದ್ರ , ಸಿಬ್ಬಂದಿಗಳಾದ ಸುರೇಶ್, ಜಯರಾಮ, ಸಂತೋಷ ಎಸ್., ಲೋಕೇಶ್ , ಲಕ್ಷ¾ಣ, ಜಗದೀಶ, ಸಚಿನ್ ವೃತ್ತ ನಿರೀಕ್ಷರ ಕಚೇರಿಯ ಸಿಬ್ಬಂದಿಗಳಾದ ಮಾಲತಿ, ಇಂದ್ರೇಶ್, ಜೀಪು ಚಾಲಕ ಮಹಾಬಲೇಶ್ವರ, ಸಲೀಂವುಲ್ಲಾ, ದಿನೇಶ ಪಾಲ್ಗೊಂಡಿದ್ದರು.
ಸಿಸಿ ಕೆಮರಾ ಬಾವಿಗೆಸಿದಿದ್ದ:
ವಿಚಾರಣೆ ವೇಳೆ ಕಳ್ಳತನ ಮಾಡಿದ ಆನಂತರ ಅಲ್ಲಿದ್ದ ಮುಖದ ಗುರುತು ಸಿಗಬಾರದೆಂದು ಅಲ್ಲಿ ಅಳವಡಿಸಿದ ಸಿಸಿ ಕ್ಯಾಮರಾವನ್ನು ಪಕ್ಕದ ಬಾವಿಗೆ ಎಸೆದಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಪೊಲೀಸರ ಮನವಿಯಂತೆ ಬಾವಿಯ 22 ಅಡಿ ಆಳಕ್ಕೆ ಮುಳುಗಿ 3ಸಿಸಿ ಕ್ಯಾಮರಾಗಳನ್ನು ಹೊರತೆಗೆದು ಮಲ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.