ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಡಾ.ಬಿ.ಆರ್.ಅಂಬೇಡ್ಕರ್ ಆಂಗ್ಲ ಮಾಧ್ಯಮ ಶಾಲೆಯೊಂದರ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆಯೇ ಮಂಗಳವಾರ ವಸತಿ ಶಾಲೆಯ ಪ್ರಾಚಾರ್ಯ ಚೇತನ್ ರೆಡ್ಡಿ ಮತ್ತು ಕಂಪ್ಯೂಟರ್ ಆಪರೇಟರ್ ಸಂಗಮೇಶಡಸ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದ್ದಾರೆ.
ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ನಂತರ ಕುಂಚಾವರಂ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಇಬ್ಬರೂ ಆರೋಪಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದರು.
ಶಾಲೆಗೆ ಮಹಿಳಾ ವಾರ್ಡನ್ ಕಂಪ್ಯೂಟರ್ ಆಪರೇಟರ್ ಮತ್ತು ಮಹಿಳಾ ಪ್ರಾಂಶುಪಾಲರನ್ನು ನಿಯೋಜಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು
ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಅಧಿಕಾರಿ ಲಭ್ಯವಾಗದಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಅವರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಸೂಚಿಸಿದರು. ಶಿಕ್ಷಣ ಇಲಾಖೆಯವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲೆಗೆ ಭೇಟಿ ನೀಡಿದ ಡಾ. ಉಮೇಶ ಜಾಧವ ಮಾತನಾಡಿ,ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಹಣ ಮಂಜೂರಾಗಿರುತ್ತದೆ. ಆದರೆ ಕೋವಿಡ್ ಕಾರಣದಿಂದ ಟೆಂಡರ್ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಕಟ್ಟಡ ನಿರ್ಮಾಣ ವೆಚ್ಚ ಹೆಚ್ಚಳವಾಗಿದ್ದರಿಂದ ಮತ್ತೆ ಅನುದಾನ ಮಂಜೂರಾತಿಗೆ ಸಚಿವರಿಗೆ ಮನವಿ ಮಾಡಿದ್ದೇವೆʼಎಂದು ತಿಳಿಸಿದರು.
ಕೋಡ್ಲಿ, ಕೊಟಗಾ ಹಾಗೂ ಅಣವಾರದಲ್ಲಿ ಬೃಹತ್ ವಸತಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯೂ ಕಟ್ಟಡ ಮಂಜೂರಾಗಲಿದೆ ಎಂದರು.