ಬೆಂಗಳೂರು: ಮಹಿಳೆಯರ ನೈಟಿಗಳನ್ನು ಧರಿಸಿ ಫೈನಾನ್ಸ್ ಕಂಪನಿಯೊಂದರ ರೋಲಿಂಗ್ ಶೆಟರ್ ಮುರಿದು ಕಳ್ಳತನಕ್ಕೆ ಯತ್ನ ಮತ್ತು ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಖಾಸಗಿ ಬಸ್ ಹಾಗೂ ವಾಹನ ಚಾಲಕರು ಸೇರಿ ಮೂವರು ರಾಜಗೋಪಾಲನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೀಣ್ಯ ನಿವಾಸಿ ಕುಮಾರ್ ಮತ್ತು ಅಂಬರೀಶ್ ಬಾಬು ಸಿಂಗ್, ಸುಂಕದಕಟ್ಟೆ ನಿವಾಸಿ ನಾಗರಾಜ್ ಬಂಧಿತರು. ಆರೋಪಿಗಳಿಂದ 10.2 ಕೆ.ಜಿ. ಆಕ್ಸಿಜನ್ ಗ್ಯಾಸ್, 6.6 ಕೆ.ಜಿ. ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ರಾಮನಗರದ ಮೂಲದ ಕುಮಾರ್ ಖಾಸಗಿ ಬಸ್ ಚಾಲಕನಾಗಿದ್ದು, ಜತೆಗೆ ಫ್ಯಾಕ್ಟರಿಯೊಂದರಲ್ಲಿ ವೆಲ್ಡಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ನೇಪಾಳ ಮೂಲದ ಅಂಬರೀಶ್ ಬಾಬು ಸಿಂಗ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನಾಗರಾಜ್ ಆಟೋ ಚಾಲಕನಾಗಿದ್ದು, ಮೂವರು ಮೋಜಿನ ಜೀವನಕ್ಕಾಗಿ ಸಾಲ ಮಾಡಿಕೊಂಡಿದ್ದರು. ಆ ಸಾಲ ತೀರಿಸಲು ಬೇರೆ ಮಾರ್ಗ ಸಿಗದೆ ಕಳ್ಳತನ ಹಾದಿ ಹಿಡಿದಿದ್ದಾರೆ. ಈ ಹಿಂದೆ ಆರೋಪಿಗಳು ಟಿ.ಕೆ.ಹಳ್ಳಿಯ ಎಟಿಎಂ ಕೇಂದ್ರದಲ್ಲಿ ಹಣ ದೋಚಲು ಯತ್ನಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ನೈಟಿ ಧರಿಸಿ ಕಳ್ಳತನ ಯತ್ನ:
ಮಹಿಳೆಯರ ನೈಟಿ ಧರಿಸಿ ಮುಖ ಗವಸು ಧರಿಸಿ ಬಂದ ಮೂವರು ಆರೋಪಿಗಳು ಮೇ.25ರಂದು ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ರಾಜಗೋಪಾಲನಗರದ ಮುಖ್ಯ ರಸ್ತೆಯಲ್ಲಿರುವ ಫೈನಾನ್ಸ್ ಕಂಪನಿಗೆ ನುಗ್ಗಿದ್ದರು. ಈ ವೇಳೆ ಕುಮಾರ್ ಗ್ಯಾಸ್ ಕಟರ್‌ನಿಂದ ರೋಲಿಂಗ್ ಶಟರ್ ಕತ್ತರಿಸಿ ಕಳವಿಗೆ ಯತ್ನಿಸಿದ್ದರು. ಯಾರಿಗೂ ಅನುಮಾನ ಬರಬಾದರು ಎಂದು ಮಹಿಳೆಯರ ಸೋಗಿನಲ್ಲಿ ಕಳವಿಗೆ ಯತ್ನಿಸಿದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ತನಿಖೆ ವೇಳೆ ಘಟನಾ ಸ್ಥಳದಲ್ಲಿ ಆರೋಪಿಗಳ ಮುಖಚಹರೆ ಪತ್ತೆಯಾಗಿದ್ದು, ಸ್ಥಳದಲ್ಲಿ ಗ್ಯಾಸ್ ಸಿಲಿಂಡರ್ ಬಳಸಿದ ಸಿಲಿಂಡರ್ ದೃಶ್ಯ ಸೆರೆಯಾಗಿತ್ತು. ಅದನ್ನು ಆಧರಿಸಿ ಗ್ಯಾಸ್ ಖರೀದಿಸಿದ ಅಂಗಡಿಯಲ್ಲಿ ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.