ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಟರ್ಫ್ ಕ್ಲಬ್‌ನಲ್ಲಿ ರೇಸಿಂಗ್ ನಿಲ್ಲಿಸಲು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ. ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಟರ್ಫ್ ಕ್ಲಬ್‌ನಲ್ಲಿ ರೇಸಿಂಗ್ ನಿಲ್ಲಿಸುವ ಸಂಬಂಧ ಹಿಂದೆಯೂ ಹಲವಾರು ಬಾರಿ ಒತ್ತಾಯ ಕೇಳಿ ಬಂದಿತ್ತು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಿಂದೆಯೇ ಆ ಬಗ್ಗೆ ಸೂಚನೆ ಸಹ ನೀಡಿತ್ತು. ಆದರೆ, ಇದೀಗ ಅಂತಿಮವಾಗಿ ಬಂದ್ ಮಾಡಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ಸರ್ಕಾìಕ್ಕೆ ಶಿಫಾರಸು ಮಾಡಲಾಗಿದೆ.
ಇದೀಗ ರೇಸ್‌ಕೋರ್ಸ್ ರಸ್ತೆಯಿಂದ ಟರ್ಫ್ ಕ್ಲಬ್ ಸ್ಥಳಾಂತರವಾಗಬೇಕು ಇಲ್ಲವೇ ಬಂದ್ ಆಗಬೇಕಾಗುತ್ತದೆ. ಆದರೆ, ಅಂತಿಮವಾಗಿ ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದರ ಮೇಲೆ ನಿಂತಿದೆ. ಸಭೆಯ ನಂತರ ಮಾತನಾಡಿದ ಎಚ್.ಕೆ.ಪಾಟೀಲ್, ಡಿ.2 ಕ್ಕೆ ಟರ್ಫ್ ಕ್ಲಬ್‌ನಲ್ಲಿ ರೇಸಿಂಗ್ ನಿಲ್ಲಿಸಬೇಕು ಅಂತ ಸೂಚನೆ ನೀಡಿದ್ದೆವು. ಆದರೆ, ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಲೈಸೆನ್ಸ್ ರದ್ದು ಮಾಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದೇವೆ ಎಂದು ಹೇಳಿದರು.
ಲೆಕ್ಕಪತ್ರ ಸಮಿತಿ ಕೈಗೊಂಡಿರುವ ತೀರ್ಮಾನ ಹಾಗೂ ಮಾಡಿರುವ ಶಿಫಾರ ಸಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂ ರಪ್ಪ ಅನುಮೋದನೆ ನೀಡುವ ಭರವಸೆ ಇದೆ ಎಂದು ತಿಳಿಸಿದರು. ಬಿಡಿಎ ಮ್ಯೂಚುಯಲ್ ಫಂಡ್‌ನಲ್ಲಿ 3 ಸಾವಿರ ಕೋಟಿ ರೂ. ಅಕ್ರಮ ಹಾಗೂ ಅನಧಿಕೃತವಾಗಿ ತೊಡಗಿಸಿದೆ.
1999 ರಿಂದ 2004 ರವರೆಗೆ ಈ ಹಣ ತೊಡಗಿಸಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ತನಿಖೆ ಸಮರ್ಪಕವಾಗಿ ನಡೆಯದ ಕಾರಣ ಗೃಹ ಕಾರ್ಯದರ್ಶಿ ಮರು ತನಿಖೆ ನಡೆಸುವುದಾಗಿ ತಿಳಿಸಿ ದ್ದಾರೆ ಎಂದರು. ಸಮಿತಿ ಸದಸ್ಯರಾದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಪರಿಷತ್ ಸದಸ್ಯ ಟಿ.ಎ.ಶರವಣ ಸಭೆಯಲ್ಲಿ ಹಾಜರಿದ್ದರು.