ಧಾರವಾಡ: ಚುನಾವಣಾ ಆಯೋಗದ ನಿಯಮಗಳ ಅನುಸಾರವಾಗಿ ಅಭ್ಯರ್ಥಿಗಳು ಲೆಕ್ಕ ಪತ್ರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ಚುನಾವಣಾ ಖರ್ಚು ವೆಚ್ಚಗಳ ವೀಕ್ಷಕರಾದ ಆನಂದಕುಮಾರ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಹೊಸ ಅತಿಥಿ ಗೃಹದಲ್ಲಿ ನಡೆದ 71 ಧಾರವಾಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಮತ್ತು ಅವರ ಅಧಿಕೃತ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲಿ ಸುಳ್ಳು ಮಾಹಿತಿ ಅಥವಾ ದಾಖಲೆಗಳನ್ನು ಸೃಷ್ಟಿಸಬಾರದು. ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ಮಿತಿಯೊಳಗೆ ಚುನಾವಣಾ ಖರ್ಚು ವೆಚ್ಚ ನಿರ್ವಹಿಸಿ, ಪ್ರತಿದಿನ ವಿವರಗಳನ್ನು ಸಲ್ಲಿಸಬೇಕು. ಪ್ರತಿಯೊಂದು ದಾಖಲೆಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಕರಪತ್ರ, ಬ್ಯಾನರ್, ಇತರೆ ಖರ್ಚು, ವೆಚ್ಚಗಳ ವಿವರಗಳನ್ನು ನೀಡಬೇಕು. ಚುನಾವಣಾ ಆಯೋಗವು ಪ್ರತಿಯೊಬ್ಬ ಅಭ್ಯರ್ಥಿಗೆ 28 ಲಕ್ಷ ರೂ.ಗಳ ವೆಚ್ಚದ ಮಿತಿ ನಿಗದಿಪಡಿಸಿದ್ದು, ಅದರ ಮಿತಿಯಲ್ಲಿ ಅಭ್ಯರ್ಥಿಗಳು ಖರ್ಚು, ವೆಚ್ಚಗಳನ್ನು ನಿರ್ವಹಿಸಬೇಕು. ಮೂರು ಹಂತಗಳಲ್ಲಿ ಚುನಾವಣೆ ವೆಚ್ಚ ಪರಿಶೀಲನೆ ಕಾರ್ಯ ನಡೆಯುತ್ತದೆ. ಪರಿಶೀಲನೆ ವೇಳೆ ತಪ್ಪದೇ ಹಾಜರಾಗಬೇಕು. ಲೆಕ್ಕ ವಹಿಗಳು, ಖರ್ಚಿನ ವೋಚರ್‌ಗಳು, ಬ್ಯಾಂಕ್ ಪಾಸ್ ಪುಸ್ತಕ, ಎಬಿಸಿ ರಜಿಸ್ಟರ್ ನಿರ್ವಹಿಸಿ ಪೂರ್ಣ ಮಾಹಿತಿ ಒದಗಿಸಬೇಕು ಎಂದರು.
71-ಧಾರವಾಡ ಕ್ಷೇತ್ರದ ಚುನಾವಣಾಧಿಕಾರಿ ಪಿ.ಜಯಮಾಧವ ಮಾತನಾಡಿ, ಅಭ್ಯರ್ಥಿಗಳು ಸರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು. ಯಾವುದೇ ಸುಳ್ಳು ದಾಖಲೆಗಳನ್ನು ನೀಡಬಾರದು. ಪ್ರಚಾರದ ಖರ್ಚು ವೆಚ್ಚಗಳನ್ನು ನೀಡಬೇಕು. ಸುಳ್ಳು ಮಾಹಿತಿ ನೀಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಪ್ರಕಾಶ ಕುದರಿ, ಸಹಾಯಕ ವೆಚ್ಚ ವೀಕ್ಷಕರಾದ ಆರ್.ಎನ್.ಈರೇಗೌಡ, ಎಸ್.ಎಂ.ಕೋಳೂರು, ವೀಕ್ಷಕರ ಲೇಸನಿಂಗ್ ಅಧಿಕಾರಿ ಪಿ.ನಾಗೇಶ ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳ ಏಜೆಂಟರು ಪಾಲ್ಗೊಂಡಿದ್ದರು.