ಬಾಗಲಕೋಟೆ: ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ವಿವಿಧ ಅಧಿಕಾರಿಗಳು ನೀಡಿದ ಲೆಕ್ಕಕ್ಕೆ ಸ್ವತಃ ಕಂದಾಯ ಸಚಿವರು ಸೇರಿದಂತೆ ಮೂವರು ಸಚಿವರು ಅನುಮಾನ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆಯಿತು.
ಜಿಪಂ ಸಭಾ ಭವನದಲ್ಲಿ ಸಂಜೆ ನಡೆದ ಬರ ನಿರ್ವಹಣೆ ಸಭೆಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಅವರು, ಅಧಿಕಾರಿಗಳು ನೀಡಿದ ಅಂಕಿ-ಸಂಖ್ಯೆ ಹಾಗೂ ವಾಸ್ತವದ ಸ್ಥಿತಿಗತಿಗೂ ವ್ಯತ್ಯಾಸವಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಭೇಟಿ ಕೊಡಲು ಸೂಚನೆ: ಸಭೆಯ ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ದೇಶಪಾಂಡೆ, ನಾನು ಸ್ವತಃ ಇಂದು ಬಾದಾಮಿ ತಾಲೂಕಿನ ಎರಡು ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಜನರು ನೀರು ಕೊಡಿ ಎಂದು ಕೇಳುತ್ತಿದ್ದಾರೆ. ದನಗಳಿಗೆ ನೀರು-ಮೇವು ಕೊಡಲು ಕೇಳಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದೀರಿ. ನಾನು ಸಮಸ್ಯೆ ಸೃಷ್ಟಿಸಲು ಇಲ್ಲಿಗೆ ಬಂದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಸಮಸ್ಯೆ ತಿಳಿಸಿ. ಅಗತ್ಯ ಬಿದ್ದರೆ ಸಲಹೆ ಕೊಡುತ್ತೇವೆ. ಜತೆಗೆ ಅನುದಾನ ಕಲ್ಪಿಸುತ್ತೇವೆ ಎಂದರು.
ಎಲ್ಲ ತಹಶೀಲ್ದಾರ್, ತಾಪಂ. ಇಒ ಹಾಗೂ ಕುಡಿಯುವ ನೀರು ಪೂರೈಕೆ, ಪಶು ಸಂಗೋಪನೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ತಮ್ಮ ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವದ ಚಿತ್ರಣ ತಿಳಿಯಬೇಕು. ಎಲ್ಲಿಯೇ ಸಮಸ್ಯೆ ಇದ್ದರೂ ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೇವಲ 7 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. 15ರಿಂದ 20 ಕಿ.ಮೀ ವರೆಗೆ ತೆರಳಿ, ತಾಲೂಕು ಕೇಂದ್ರದಿಂದ ಮೇವು ತರಲು ರೈತರಿಗೆ ಆಗುವುದಿಲ್ಲ. ಹೋಬಳಿಗೊಂದು ಅಥವಾ ಅಗತ್ಯಬಿದ್ದೆಡೆ ಮೇವು ಬ್ಯಾಂಕ್ ಸ್ಥಾಪಿಸಬೇಕು. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗ್ಗೆ ಚರ್ಚೆ ಮಾಡಿ. ಅವರ ಸಲಹೆ ಯೋಗ್ಯವಾಗಿದ್ದರೆ, ಅನುಷ್ಠಾನಕ್ಕೆ ತನ್ನಿ. ಅಲ್ಲದೇ ಒಂದು ವಾರದಲ್ಲಿ ಜಿಲ್ಲೆಯ ಅರ್ಹ ರೈತರಿಗೆ ಬೆಳೆ ಪರಿಹಾರ ವಿತರಣೆಯಾಗಬೇಕು ಎಂದು ಸೂಚಿಸಿದರು.
ಶಾಶ್ವತ ಯೋಜನೆ ಕೈಗೊಳ್ಳಿ: ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವುದು ಅಂತಿಮ ಪರಿಹಾರವಲ್ಲ. ಎಷ್ಟು ಕೊಳವೆ ಬಾವಿ ಕೊರೆದಂತೆ, ಬೇರೆ ಕೊಳವೆ ಬಾವಿ ಸ್ಥಗಿತಗೊಳ್ಳುತ್ತವೆ. ಬರದ ಹಿನ್ನೆಲೆಯಲ್ಲಿ ಸಧ್ಯ ತಾತ್ಕಲಿಕ ವ್ಯವಸ್ಥೆ ಮಾಡಿ. ಬಳಿಕ ಜಿಲ್ಲೆಯ ಎಲ್ಲಾ ಜನ ವಸತಿಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಕೊಡಲು ಯೋಜನೆ ಕೈಗೊಳ್ಳಬೇಕು ಎಂದು ಸಚಿವ ದೇಶಪಾಂಡೆ ಸೂಚಿಸಿದರು.